ಕಡುಬಡವರ ಅಭಿವೃದ್ಧಿಗೆ ಪ್ರತ್ಯೇಕ ಹಣ ಮೀಸಲಿಡಲಿ: ಡಾ.ಶಾಂತವೀರ ಸ್ವಾಮೀಜಿ
ಬೆಂಗಳೂರು, ಜೂ.18: ಕಡುಬಡವರು ಎಲ್ಲ ಸಮುದಾಯಗಳಲ್ಲಿದ್ದು, ಇವರ ಅಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪ್ರತ್ಯೇಕವಾಗಿ ಹಣ ಮೀಸಲಿಡಬೇಕು ಎಂದು ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ ಹೇಳಿದ್ದಾರೆ.
ರವಿವಾರ ಕನ್ನಡ ಭವನದಲ್ಲಿ ಕರ್ನಾಟಕ ಸಾಂಸ್ಕೃತಿಕ ಅಕಾಡಮಿ ಆಯೋಜಿಸಿದ್ದ ಕರ್ನಾಟಕ ಏಕೀಕರಣದ ವಜ್ರ ಮಹೋತ್ಸವ ಆಚರಣೆ ಹಾಗೂ ನಾಡಿನ ಗಣ್ಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುವ ಮೊದಲು ಕಡು-ಬಡವರಿಗಾಗಿ ಶ್ರಮಿಸುತ್ತೇವೆ ಎಂದು ಆಶ್ವಾಸನೆ ನೀಡುತ್ತವೆ. ಆದರೆ, ಅಧಿಕಾರಕ್ಕೆ ಬಂದ ತಕ್ಷಣ ಕಡುಬಡವರನ್ನು ಮರೆತು ಬಿಡುತ್ತವೆ. ಈ ರೀತಿಯ ಮೋಸದ ಆಶ್ವಾಸನೆಗಳನ್ನು ನೀಡುವ ಬದಲು ಆಶ್ವಾಸನೆಯಂತೆ ಕಡುಬಡವರ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳಿದರು.
ಹನ್ನೇರಡನೆಯ ಶತಮಾನದಲ್ಲಿಯೇ ಬಸವಣ್ಣನವರು ಜಾತಿ ಹೋಗಲಾಡಿಸಲು ಕ್ರಾಂತಿಯನ್ನೆ ಮಾಡಿದ್ದರು. ಆದರೆ, ಇಂದೂ ಜಾತಿಯ ಹೆಸರಿನಲ್ಲಿ ಅಸ್ಪಶ್ಯತೆ ಜೀವಂತವಾಗಿದ್ದು, ಇದನ್ನು ತಡೆಗಟ್ಟಲು ಬಸವಣ್ಣ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರಂತಹ ಮಾನವತಾವಾದಿಗಳು ಮತ್ತೊಮ್ಮೆ ಹುಟ್ಟಿ ಬರಬೇಕಾಗಿದೆ ಎಂದು ತಿಳಿಸಿದರು.
ಚಿಂತಕರು ಹಾಗೂ ಸಾಹಿತಿಗಳು ಕನ್ನಡವನ್ನು ಉಳಿಸಿ ಬೆಳೆಸಬೇಕೆಂದು ಭಾಷಣಗಳನ್ನು ಮಾಡುತ್ತಾರೆ. ಆದರೆ, ತಮ್ಮ ಮಕ್ಕಳು ಹಾಗೂ ಮೊಮ್ಮಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ. ಈ ರೀತಿಯ ಚಿಂತಕರು ಹಾಗೂ ಸಾಹಿತಿಗಳು ನಮಗೆ ಬೇಕಾಗಿಲ್ಲ ಎಂದು ದೂರಿದರು.