ಹಾಕಿ ವರ್ಲ್ಡ್ ಲೀಗ್ ಸೆಮಿಫೈನಲ್ಸ್ ಟೂರ್ನಿ: ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಹರ್ಮನ್‌ಪ್ರೀತ್, ತಲ್ವಿಂದರ್, ಆಕಾಶ್‌ದೀಪ್ ತಲಾ 2 ಗೋಲು

ಲಂಡನ್, ಜೂ.18: ಹರ್ಮನ್‌ಪ್ರೀತ್ ಸಿಂಗ್, ತಲ್ವಿಂದರ್ ಸಿಂಗ್ ಹಾಗೂ ಆಕಾಶ್‌ದೀಪ್ ಸಿಂಗ್ ಬಾರಿಸಿದ ತಲಾ ಎರಡು ಗೋಲುಗಳ ನೆರವಿನಿಂದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಹಾಕಿ ವರ್ಲ್ಡ್ ಲೀಗ್ ಸೆಮಿಫೈನಲ್ಸ್ ಟೂರ್ನಿಯ ತನ್ನ ಮೂರನೆ ಪಂದ್ಯದಲ್ಲಿ 7-1 ಅಂತರದಿಂದ ಜಯ ಸಾಧಿಸಿದೆ.
ರವಿವಾರ ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ಪರ ಉಮರ್ ಬಟ್ 57ನೆ ನಿಮಿಷದಲ್ಲಿ ಸಮಾಧಾನಕರ ಗೋಲು ಬಾರಿಸಿದ್ದರು. ಈಗಾಗಲೇ ಮೊದಲೆರಡು ಪಂದ್ಯಗಳಲ್ಲಿ ಸ್ಕಾಟ್ಲೆಂಡ್(4-1) ಹಾಗೂ ಕೆನಡಾ(3-0) ತಂಡವನ್ನು ಮಣಿಸಿದ್ದ ಭಾರತ ತಂಡ ‘ಹ್ಯಾಟ್ರಿಕ್’ ಗೆಲುವು ಸಾಧಿಸಿದ್ದು, ‘ಬಿ’ ಗುಂಪಿನಲ್ಲಿ 3 ಪಂದ್ಯಗಳಲ್ಲಿ 9 ಅಂಕ ಗಳಿಸಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.
ಹಾಲೆಂಡ್ ವಿರುದ್ಧ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಭಾರತ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್ ಸ್ಥಾನವನ್ನು ದೃಢಪಡಿಸಿದೆ. ಪ್ರಚಂಡ ಪ್ರದರ್ಶನ ನೀಡಿದ ಭಾರತದ ಪರ ಹರ್ಮನ್‌ಪ್ರೀತ್(13ನೆ, 33ನೆ ನಿಮಿಷ),ತಲ್ವಿಂದರ್ ಸಿಂಗ್(21, 24ನೆ ನಿಮಿಷ) ಹಾಗೂ ಆಕಾಶ್‌ದೀಪ್ ಸಿಂಗ್(47ನೆ, 59ನೆ ನಿಮಿಷ) ಅವಳಿ ಗೋಲು ಬಾರಿಸಿ ಭರ್ಜರಿ ಗೆಲುವಿಗೆ ದೊಡ್ಡ ಕಾಣಿಕೆ ನೀಡಿದರು. 48ನೆ ನಿಮಿಷದಲ್ಲಿ ಪ್ರದೀಪ್ ಮೊರ್ ಏಕೈಕ ಗೋಲು ಬಾರಿಸಿ ತಂಡದ ಗೆಲುವಿನ ಅಂತರವನ್ನು ಹಿಗ್ಗಿಸಿದರು.
ಭಾರತ ಹರ್ಮನ್‌ಪ್ರೀತ್ ಹಾಗೂ ತಲ್ವಿಂದರ್ ಸಿಂಗ್ ಸಾಹಸದ ನೆರವಿನಿಂದ ಮೊದಲಾರ್ಧದಲ್ಲಿ 3-0 ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ಪಾಕ್ ಮೇಲೆ ಸವಾರಿ ಮಾಡಿದ ಭಾರತ ಇನ್ನೂ ನಾಲ್ಕು ಗೋಲುಗಳನ್ನು ಬಾರಿಸಿತು. ಭಾರತ 2016ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್‌ನ್ನು ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಪಾಕ್ ತಂಡ ಭಾರತ ವಿರುದ್ಧ ಪಂದ್ಯಕ್ಕೆ ಮೊದಲು ಹಾಲೆಂಡ್(0-4) ಹಾಗೂ ಕೆನಡಾ(0-6) ವಿರುದ್ಧ ಹೀನಾಯವಾಗಿ ಸೋತಿತ್ತು.
ಉಭಯ ತಂಡಗಳು 168 ಬಾರಿ ಮುಖಾಮುಖಿಯಾಗಿದ್ದು, ಭಾರತ 55ರಲ್ಲಿ ಜಯ ಸಾಧಿಸಿದ್ದರೆ, ಪಾಕಿಸ್ತಾನ 82 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. 30 ಪಂದ್ಯಗಳು ಡ್ರಾಗೊಂಡಿವೆ.







