ಶಿಕ್ಷಕರ ವರ್ಗಾವಣೆಗೆ ಹೊಸ ನೀತಿ: ತನ್ವೀರ್‌ಸೇಠ್
.jpg)
ಬೆಂಗಳೂರು, ಜೂ.18: ಶಿಕ್ಷಕರ ವರ್ಗಾವಣೆಯಲ್ಲಿ ಆಗುತ್ತಿದ್ದ ಗೊಂದಲವನ್ನು ತಪ್ಪಿಸಲು ಹೊಸ ವರ್ಗಾವಣೆ ನೀತಿಯನ್ನು ಜಾರಿ ಮಾಡಲಾಗಿದ್ದು, ಪ್ರಸಕ್ತ ಸಾಲಿನಿಂದಲೆ ಅನ್ವಯವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ಸೇಠ್ ತಿಳಿಸಿದ್ದಾರೆ.
ರವಿವಾರ ನಗರದ ಅಮರಾವತಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ವರ್ಗಾವಣೆ ಮಿತಿಯನ್ನು ಶೇ.5ರಿಂದ ಶೇ.15ಕ್ಕೆ ಹೆಚ್ಚಿಸಲಾಗಿದೆ. ಅದಕ್ಕಾಗಿ ಎ, ಬಿ, ಸಿ ಎಂದು ಮೂರು ವಲಯಗಳನ್ನಾಗಿ ವಿಂಗಡಣೆ ಮಾಡಲಾಗಿದೆ ಎಂದರು.
ಎ ವಲಯದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದವರು ವರ್ಗಾವಣೆಗೆ ಅರ್ಹರಾಗಿರುತ್ತಾರೆ. ದಂಪತಿಗಳಿದ್ದಲ್ಲಿ ಅವರ ಆದ್ಯತೆ ಮೇರೆಗೆ ವರ್ಗಾವಣೆ ಮಾಡಲಾಗುವುದು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಶಾಲಾ ಮಕ್ಕಳ ಸುರಕ್ಷತೆ, ಶುಲ್ಕ ನಿಯಂತ್ರಣ, ಕನ್ನಡ ಭಾಷೆ ಕಡ್ಡಾಯ ಮತ್ತು ಡೊನೇಷನ್ ಹಾವಳಿ ತಡೆಗೆ ಕಠಿಣ ಕಾನೂನು ರೂಪಿಸಿ, ಅಂತಿಮ ರೂಪ ನೀಡಲಾಗಿದೆ ಎಂದು ಅವರು ಹೇಳಿದರು.
ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು 18 ಸಾವಿರ ಶಿಕ್ಷಕರ ಕೊರತೆಯಿದ್ದು. ಪ್ರಸ್ತುತ 10 ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲು ಸರಕಾರ ಆದೇಶ ನೀಡಿದೆ. ಇನ್ನುಳಿದ ಎಂಟು ಸಾವಿರ ಶಿಕ್ಷಕರನ್ನು ಹಂತ-ಹಂತವಾಗಿ ನೇಮಕ ಮಾಡಿಕೊಳ್ಳಲಾಗುವುದು. ಶಿಕ್ಷಕರ ನೇಮಕಾತಿಯಲ್ಲಿ ಹೈದರಾಬಾದ್-ಕರ್ನಾಟಕ ಭಾಗದ ಜಿಲ್ಲೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.
ಮಕ್ಕಳು ಹಾಗೂ ಪೋಷಕರ ಬೇಡಿಕೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಹೋಬಳಿಗೊಂದು ಆದರ್ಶ ಶಾಲೆ ತೆರೆಯುವುದು ಮತ್ತು ಸರಕಾರಿ ಶಾಲೆಗಳಲ್ಲಿ ಬಯೋಮೆಟ್ರಿಕ್ ಅಳವಡಿಸಲು ಚಿಂತನೆ ನಡೆದಿದೆ. ಶಾಲೆಗಳ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು 250 ಕೋಟಿ ರೂ. ಅನುದಾನ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತನ್ವೀರ್‌ಸೇಠ್ ತಿಳಿಸಿದರು.
ಖಾಸಗಿ ಶಾಲೆಗಳ ಹಾವಳಿ ತಡೆ, ಸರಕಾರಿ ಶಾಲೆಗಳ ಗುಣಮಟ್ಟ ಅಭಿವೃದ್ಧಿಗೆ ವಿಶೇಷ ಒತ್ತು. ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆ ತರಲಾಗಿದೆ. ಪಿಯುಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು, ದೇಶಕ್ಕೆ ಮಾದರಿಯಾಗಿದೆ. ಮಕ್ಕಳಲ್ಲಿನ ಆತಂಕವನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಸಕಾಲಕ್ಕೆ ಶಾಲೆಗಳಿಗೆ ಪಠ್ಯಪುಸ್ತಕ ಪೂರೈಕೆ ಮಾಡಲಾಗುತ್ತಿದ್ದು, ಸ್ಥಳೀಯ ಶಾಸಕರು ಸೇರಿದಂತೆ ಜನಪ್ರತಿನಿಧಿಗಳಿಂದ ಪುಸ್ತಕಗಳ ವಿತರಣೆಗೆ ಚಾಲನೆ ನೀಡಲಾಗಿದೆ. ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಠಿಯಿಂದ ಈ ವರ್ಷ 50 ಸಾವಿರ ಶಿಕ್ಷಕರಿಗೆ ತರಬೇತಿ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತನ್ವೀರ್‌ಸೇಠ್ ತಿಳಿಸಿದರು.







