ಹುಚ್ಚ ವೆಂಕಟ್ ಆತ್ಮಹತ್ಯೆಗೆ ವಿಫಲಯತ್ನ

ಬೆಂಗಳೂರು, ಜೂ.18: ಪ್ರೇಯಸಿ, ಆಕೆಯ ಕುಟುಂಬದವರು ಮದುವೆಗೆ ನಿರಕರಿಸಿದ್ದಾರೆ ಎಂದು ಆರೋಪಿಸಿ ಮಾಧ್ಯಮ ಹಾಗೂ ಆತ್ಮೀಯರಿಗೆ ಮೊಬೈಲ್ ಸಂದೇಶ ಕಳಿಸಿದ ನಂತರ ನಟ ಹುಚ್ಚ ವೆಂಕಟ್ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಗರದ ಯಶವಂತಪುರ ನಿವಾಸದಲ್ಲಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಶಿವಾನಂದ ವೃತ್ತ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇನ್ನೂ ಪ್ರಾಣಾಪಾಯ ದಿಂದ ಪರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪ್ರೇಮ ವೈಫಲ್ಯ?: ಖಾಸಗಿ ವಾಹಿನಿಯೊಂದರಲ್ಲಿ ತಮ್ಮ ಜತೆ ನಟಿಸಿದ್ದ ನಟಿಯನ್ನು ನಾನು ಪ್ರೀತಿಸುತ್ತಿದ್ದೆ. ಆಕೆಯೂ ನನ್ನನ್ನು ಪ್ರೀತಿಸುತ್ತಿದ್ದಳು. ಆದರೆ ನಾವು ಒಂದಾಗುವುದು ಆಕೆಯ ಕುಟುಂಬದವರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಅವರು ಸುಳ್ಳು ಹೇಳಿ ನನ್ನಿಂದ ಆಕೆಯನ್ನು ದೂರ ಮಾಡಿದ್ದಾರೆ. ಆಕೆ ನನಗೆ ಮೋಸ ಮಾಡಿದ್ದಾಳೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ಫಿನಾಯಿಲ್ ಕುಡಿಯುತ್ತಿರುವುದಾಗಿ ಮಾಧ್ಯಮಗಳಿಗೆ ಮತ್ತು ಆತ್ಮೀಯರಿಗೆ ಸಂದೇಶ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯಲ್ಲಿ ಗಲಾಟೆ: ಆಸ್ಪತ್ರೆಗೆ ಆಗಮಿಸಿದ ಹುಚ್ಚ ವೆಂಕಟ್ ಆರಂಭದಲ್ಲಿ ಎಲ್ಲರ ಮೇಲೂ ಹರಿಹಾಯ್ದಿದ್ದಾರೆ. ಮಾಹಿತಿ ಕೇಳಿದ ವೈದ್ಯರನ್ನೂ ಗದರಿಸಿದ್ದಾರೆ. ಇದಾದ ನಂತರ ಅವರ ಮನವೊಲಿಸಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಪ್ರಾಥಮಿಕ ವರದಿ ಪ್ರಕಾರ ಹುಚ್ಚ ವೆಂಕಟ್ ಫಿನಾಯಿಲ್ ಸೇವಿಸಿದ್ದು ನಿಜ. ಆದರೆ, ಯಾವ ಪ್ರಮಾಣದಲ್ಲಿ ಸೇವಿಸಿದ್ದಾರೆ ಎಂದು ತಿಳಿಯುತ್ತಿಲ್ಲ. ಬಹುಷ್ಯ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿಲ್ಲ. ಚಿಕಿತ್ಸೆ ನೀಡುತ್ತಿದ್ದೇವೆ. ಅಪಾಯವಿಲ್ಲ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ಪ್ರಚಾರ ಹುಚ್ಚು: ಪ್ರಚಾರದ ಹುಚ್ಚು ಹೆಚ್ಚಾಗಿರುವ ವೆಂಕಟ್ ಈ ಕಾರ್ಯವನ್ನೂ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಯಿಂದ ಕೂಡ ಮಾಧ್ಯಮದವರಿಗೆ ಕರೆ ಮಾಡಿ ಹುಚ್ಚ ವೆಂಕಟ್ ಶಿಷ್ಯಂದಿರು ಯಾವಾಗ ಬರುತ್ತೀರಿ? ಎಲ್ಲಿದ್ದೀರಿ? ಎಂದು ಹೇಳಿದ್ದಾರೆ ಎನ್ನಲಾಗಿದೆ.
ಪೊಲೀಸರ ಭೇಟಿ: ಘಟನೆ ಬಳಿಕ ನಗರದ ಹೈಗ್ರೌಂಡ್ ಠಾಣಾ ಪೊಲೀಸರು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ವೆಂಕಟ್ ಕುಟುಂಬಸ್ಥರ ಬಳಿ ಮಾಹಿತಿ ಪಡೆದಿದ್ದಾರೆ.







