ವ್ಯಕ್ತಿ ನಾಪತ್ತೆ :ಪೊಲೀಸರಿಗೆ ದೂರು
ಪುತ್ತೂರು,ಜು.18 : ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಅರೆಯುವ ಕಲ್ಲು ತಯಾರಿಕಾ ವೃತ್ತಿ ನಡೆಸುತ್ತಿದ್ದ ಮಧ್ಯವಯಸ್ಕ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಕುರಿತು ಸಂಪ್ಯ ಪೊಲೀಸರಿಗೆ ದೂರು ನೀಡಲಾಗಿದೆ.
ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ, ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಕಳೆದ ಹಲವು ವರ್ಷಗಳಿಂದ ಅರೆಯುವ ಕಲ್ಲು ತಯಾರಿಸುವ ಕಾಯಕ ನಡೆಸುತ್ತಿದ್ದ ಮಹಾಲಿಂಗ (52) ನಾಪತ್ತೆಯಾದವರು.
ಕಳೆದ ಒಂದು ತಿಂಗಳಿಂದೀಚೆಗೆ ಸೊಂಟ ನೋವಿನಿಂದ ಬಳಲುತ್ತಿದ್ದ ಮಹಾಲಿಂಗ ಅವರು ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಉಳಿದು ಕೊಂಡಿದ್ದರು. ಕಳೆದ ಜೂ.9ರಂದು ಮಧ್ಯಾಹ್ನ ವೇಳೆ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಪುತ್ತೂರು ಕಡೆಗೆ ಹೊರಟ ಅವರು ಮನೆಗೆ ಹಿಂತಿರುಗಿ ಬಾರದೆ ನಾಪತ್ತೆಯಾಗಿರುವುದಾಗಿ ದೂರು ನೀಡಲಾಗಿದೆ.
ಮಹಾಲಿಂಗ ಅವರು ಈ ಹಿಂದೊಮ್ಮೆ ಮನೆ ಬಿಟ್ಟು ಹೋದವರು ಮೂರು ದಿನಗಳ ಬಳಿಕ ಮನೆಗೆ ಬಂದಿದ್ದರು. ಈ ಹಿನ್ನಲೆಯಲ್ಲಿ ಮನೆಯವರು ಅವರು ಹಿಂತಿರುಗಿ ಬರಬಹುದೆನ್ನುವ ನಂಬಿಕೆಯಲ್ಲಿದ್ದರು.ಆದರೆ ಮಹಾಲಿಂಗ ಅವರು ವಾರ ಕಳೆದರೂ ಮನೆಗೆ ಹಿಂತಿರುಗದ ಹಿನ್ನಲೆಯಲ್ಲಿ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಾಲಿಂಗ ಅವರ ಪುತ್ರ ಸತೀಶ್ ಅವರು ನೀಡಿರುವ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.