ಕೌಟುಂಬಿಕ ಕಲಹ ಹಿನ್ನೆಲೆ; ತಾಯಿ, ಮಗುವಿನೊಂದಿಗೆ ಆತ್ಮಹತ್ಯೆ

ಜಗಳೂರು,ಜೂ18: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಾಯಿ ತನ್ನ 9 ತಿಂಗಳ ಹೆಣ್ಣುಮಗುವಿನೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಭಾನುವಾರ ಬೆಳಿಗ್ಗೆ ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ನಡೆದಿದೆ.
ಹನುಮಕ್ಕ (22) ಹಾಗೂ 9 ತಿಂಗಳ ಹೆಣ್ಣು ಮಗು ಕಾವ್ಯ ಸಾವನ್ನಪ್ಪಿದ ದುರ್ದೈವಿಗಳು.
ಬಿಳಿಚೋಡಿನ ರಂಗಸ್ವಾಮಿ, ದಾವಣಗೆರೆ ತಾಲೂಕಿನ ಚಿತ್ತನಹಳ್ಳಿ ಗ್ರಾಮದ ಹನುಮಕ್ಕ ಇವರನ್ನು ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಇಬ್ಬರ ನಡುವೆ ಆಗಾಗ ಕ್ಷುಲ್ಲಕ ಕಾರಣಕ್ಕೆ ಸಣ್ಣಪುಟ್ಟ ಜಗಳ ನಡೆಯುತ್ತಿದ್ದವು ಎನ್ನಲಾಗುತ್ತಿದ್ದು, ಹನುಮಕ್ಕ ತನ್ನ ತವರು ಮನೆಯಿಂದ ಶನಿವಾರ ಬಿಳಿಚೋಡಿಗೆ ಆಗಮಿಸಿದ್ದಾರೆ. ಭಾನುವಾರ ಕುಟುಂಬದ ಎಲ್ಲಾ ಸದಸ್ಯರು ಸಂಬಂಧಿ ಮದುವೆಗೆ ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬೆಳಿಗ್ಗೆ 11 ಗಂಟೆಗೆ ತನ್ನ ಮಗುವಿನೊಂದಿಗೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಆದರೆ, ಹನುಮಕ್ಕನ ಗಂಡ ರಂಗನಾಥನೇ ಇವರನ್ನು ಕೊಲೆ ಮಾಡಿರುವುದಾಗಿ ಸಂಬಂಧಿಕರು ಆರೋಪಿಸಿದ್ದು, ಸ್ಥಳಕ್ಕೆ ಬಿಳಿಚೋಡು ಠಾಣೆ ಸಿಪಿಐ ಬಿ.ಕೆ. ಲತಾ, ಪಿಎಸ್‌ಐ ವೆಂಕಟೇಶ್ ಮತ್ತಿತರರು ಭೇಟಿ ನೀಡಿ ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. .





