ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ
ಮಂಗಳೂರು, ಜೂ.18: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ 2017-18ರ ಸಾಲಿಗೆ ಸ್ವಉದ್ಯೋಗಕ್ಕಾಗಿ ವಿವಿಧ ಯೋಜನೆಗಳಲ್ಲಿ ಅಲ್ಪಸಂಖ್ಯಾತ ವರ್ಗಗಳ ಹಾಗೂ ಕ್ರೈಸ್ತ ಸಮುದಾಯದ ಅಭಿವೃದ್ಧಿ ಯೋಜನೆಯಡಿ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಈ ಯೋಜನೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಶೇ. 33ರಷ್ಟು ಮತ್ತು ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ಶೇ.3ರಷ್ಟು ಆದ್ಯತೆ ಮೀಸಲಿರಿಸಲಾಗಿದೆ.
ಅರ್ಜಿದಾರರು ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಪಾರ್ಸಿ, ಸಿಖ್, ಬೌದ್ಧ) ವರ್ಗಕ್ಕೆ ಸೇರಿದವರಾಗಿರಬೇಕು.
ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರಕ್ಕೆ ರೂ. 81,000, ನಗರ ಪರಿಮಿತಿಗೆ ರೂ. 1,03,000ಗಳನ್ನು ಮೀರಿರಬಾರದು. (ಅರಿವು ಸಾಲಕ್ಕೆ ಮಾತ್ರರೂ. 6 ಲಕ್ಷ). ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಿರಬೇಕು. ಪಡಿತರಚೀಟಿ, ವೋಟರ್‌ಐಡಿ, ಆಧಾರ್ ಕಾರ್ಡ್ ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ, ಕೊಟೇಶನ್, ಲೈಸನ್ಸ್, ಭಾವಚಿತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು.
ಅರ್ಜಿದಾರರು ತಮ್ಮ ವಿಳಾಸದ ದೃಢೀರಣಕ್ಕಾಗಿ ಆಧಾರ್ ಕಾರ್ಡ್‌ಪ್ರತಿಯನ್ನು ಲಗತ್ತಿಸಿ ಅದನ್ನು ಅವರ ಬ್ಯಾಂಕ್ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು.
ಸಾಲದ ಯೋಜನೆಗಳು:
ಸ್ವಯಂ ಉದ್ಯೋಗ ಯೋಜನೆ ಮತೀಯ ಅಲ್ಪಸಂಖ್ಯಾತ ವರ್ಗದವರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ಖರು ಬೌದ್ಧ ಜನಾಂಗದವರು ಕೈಗೊಳ್ಳುವ ವ್ಯಾಪಾರ, ಸಣ್ಣ ಕೈಗಾರಿಕೆ, ಕೃಷಿ ಮತ್ತು ಕೃಷಿ ಅವಲಂಬಿತ ಚಟುವಟಿಕೆಗಳು ಸೇವಾ ವಲಯದಲ್ಲಿ ಬರುವ ಚಟುವಟಿಕೆಗಳಿಗೆ ಬ್ಯಾಂಕ್/ ಹಣಕಾಸು ಸಂಸ್ಥೆಗಳ ಸಹಯೋಗದಿಂದ ಗರಿಷ್ಠ 5 ಲಕ್ಷ ರೂ.ವರೆಗೆ ಆರ್ಥಿಕ ನೆರವು ಒದಗಿಸುವುದು.
ಘಟಕ ವೆಚ್ಚ 5 ಲಕ್ಷದವರೆಗೆ ನಿಗಮದಿಂದ ಘಟಕ ವೆಚ್ಚದ ಶೇ.33 ಅಥವಾ ಗರಿಷ್ಠ ಮಿತಿ ರೂ. 2 ಲಕ್ಷದ ಧನ ಸಹಾಯ ಹಾಗೂ ಘಟಕ ವೆಚ್ಚದ 1ಲಕ್ಷದ ಒಳಗೆ ಇರುವ ಚಟುವಟಿಕೆಗಳಿಗೆ ಶೇ. 50 ಅಥವಾ ಗರಿಷ್ಠ ಮಿತಿ 35 ಸಾವಿರ ಸಹಾಯಧನ ಮಂಜೂರು ಮಾಡುವುದು. ಉಳಿಕೆ ಮೊತ್ತವನ್ನು ಬ್ಯಾಂಕ್ ಭರಿಸುವುದು.
ಶ್ರಮಕ್ತಿ ಯೋಜನೆ:
ಈ ಯೋಜನೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಕಡುಬಡವರು ಸಾಂಪ್ರದಾಯಿಕ ಕುಶಲಕರ್ಮಿಗಳು ಹಾಗೂ ವೃತ್ತಿ ಕುಲ ಕಸುಬುದಾರರು ಆಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ ತಮ್ಮ ಸಾಂಪ್ರದಾಯಿಕ ಮಾರುಕಟ್ಟೆಯನ್ನು ಹಾಗೂ ವೃತ್ತಿ ಕೌಶಲತೆಗೆ ಅನುಗುಣವಾಗಿ ಅಭಿವೃದ್ಧಿಪಡಿಸಿಕೊಳ್ಳಲು ಮತ್ತು ಆದಾಯ ಹೆಚ್ಚಿಸುವ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅಗತ್ಯರುವ ಆರ್ಥಿಕ ನೆರವನ್ನು ಕಲ್ಪಿಸುವ ಉದ್ದೇಶದಿಂದ ಶ್ರಮಶಕ್ತಿ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಹಾಗೂ ಕಚ್ಚಾ ಸಾಮಗ್ರಿಗಳನ್ನು ಖರೀದಿಸಲು 50 ಸಾವಿರದವರೆಗೆ ಸಾಲ/ ಸಹಾಯಧನ ಸೌಲಭ್ಯ ನೀಡಲಾಗುವುದು.
ಘಟಕ ವೆಚ್ಚ ರೂ. 50 ಸಾವಿರದ ಸಾಲದ ಮಂಜೂರಾತಿಯು ಸಾಂಪ್ರದಾಮಿಕ ಪರಂಪರಾಗತ ಕುಶಲಕರ್ಮಿಗಳು/ ವೃತ್ತಿ ಕುಲಕಸುಬುದಾರರಿಗೆ ಅನ್ವಯವಾಗುತ್ತದೆ. ಇತರ ವೃತ್ತಿಗಳಿಗೆ ಯೋಜನೆಯ ಲಾಭದಾಯಕತೆ ಮತ್ತು ಆದಾಯಗಳಿಗೆ ಅನುಗುಣವಾಗಿ ರೂ.25 ಸಾವಿರಕ್ಕೆ ಮೀರದಂತೆ ಸಾಲವನ್ನು ಮಂಜೂರು ಮಾಡಲಾಗುವುದು. ಈ ಸಾಲಕ್ಕೆ ಶೇ. 50 ರಷ್ಟು ಸಹಾಯಧನವನ್ನು ಬ್ಯಾಕ್ ಆಂಡ್ ಸಬ್ಸಿಡಿಯಾಗಿ ಪರಿಗಣಿಸಲಾಗುವುದು. ನಿಗಮದಿಂದ ಬಿಡುಗಡೆ ಮಾಡಿದ ಸಾಲಕ್ಕೆ ಶೇ. 4ರ ಬಡ್ಡಿ ದರದಲ್ಲಿ ಮರುಪಾವತಿ ಪಡೆಯಲಾಗುತ್ತದೆ.
ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಸಾಲ ಮಂಜೂರು ಮಾಡಲಾಗುವುದು.
ಅರಿವು (ವಿದ್ಯಾಭ್ಯಾಸ) ಸಾಲ ಯೋಜನೆ:
ಈ ಯೊಜನೆಯಡಿಯಲ್ಲಿ ವೃತ್ತಿನಿರತ ವಿದ್ಯಾಭ್ಯಾಸಕ್ಕಾಗಿ ಅಂದರೆ ಎಂ.ಬಿ.ಬಿ.ಎಸ್, ಎಂಜಿನಿಯರಿಂಗ್, ಎಂ.ಬಿ.ಎ, ಎಂ.ಸಿ.ಎ., ಎಂ.ಟೆಕ್, ಪಿ.ಎಚ್.ಡಿ, ಎಂ.ಇ, ಎಂ.ಎಸ್ (ಡಿಗ್ರಿ), ಎಂ.ಡಿ, ಎಂ.ಎಫ್.ಎ, ಎಂ.ಡಿ.ಎಸ್, ಎಂ.ಟಿ.ಎ, ಎಂ.ಐ.ಬಿ, ಬಿ.ಎ, ಬಿ.ಕಾಂ, ಡಿ.ಎಡ್, ಐ.ಟಿ.ಐ, ಡಿಪ್ಲೊಮೊ, ನಸಿರ್ಂಗ್, ಬಿ.ಡಿ.ಎಸ್, ಎಂ.ಎ, ಬಿ.ಎಸ್ಸಿ, ಬಿ.ಎ, ಬಿ.ಕಾಂ, ಏರ್ ಕ್ರಾಫ್ಟ್, ಮಂಟನೆನ್ಸ್ ಎಂಜಿನಿಯರಿಂಗ್, ಟೆಕ್ನಿಕಲ್ ಮ್ಯಾನೆಜ್ಮೆಂಟ್ ಇತ್ಯಾದಿ ವಿದ್ಯಾಭ್ಯಾಸಕ್ಕಾಗಿ ಅಭ್ಯರ್ಥಿಗಳಿಗೆ ಅವರು ವ್ಯಾಸಂಗ ಪೂರ್ಣಗೊಳಿಸುವವರೆಗೆ ಪ್ರತಿ ವರ್ಷಕ್ಕೆ ರೂ. 10 ಸಾವಿರದಿಂದ ರೂ. 75 ಸಾವಿರದವರೆಗೆ ವಿವಿಧ ವ್ಯಾಸಂಗಕ್ಕೆ ಅನುಗುಣವಾಗಿ ನಿಗಮದಿಂದ ಸಾಲ ಸೌಲಭ್ಯವನ್ನು ಕಲ್ಪಿಸುವ ಉದ್ದೇಶ ಹೊಂದಿದೆ.
ಬಿ.ಇ, ಎಂ.ಬಿ.ಬಿ.ಎಸ್, ಬಿ.ಡಿ.ಎಸ್, ಬಿ.ಯು.ಎಂ.ಎಸ್ ಹಾಗೂ ಬಿ.ಎ.ಎಂ.ಎಸ್ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಸಿ.ಇ.ಟಿಯವರು ನಿಗದಿಪಡಿಸಿದ ಶುಲ್ಕದಂತೆ ಸಾಲ ಬಿಡುಗಡೆ ಮಾಡಲಾಗುವುದು. ಇದಕ್ಕೆ ವಾರ್ಷಿಕವಾಗಿ ಶೇ.2 ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ ಹಾಗೂ ವ್ಯಾಸಂಗ ಮುಗಿಸಿದ ಒಂದು ವರ್ಷದ ನಂತರ ಫಲಾನುಭವಿಯ ನಿಗಮಕ್ಕೆ ಮರುಪಾವತಿಯನ್ನು ಮಾಡಬೇಕಾಗಿದೆ.
ಅರಿವು (ಸಿಇಟಿ)ಯೋಜನೆ:
ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಯು ರ್ಯಾಂಕ್ ಪಡೆದು ವೃತ್ತಿಪರ ಶಿಕ್ಷಣಕ್ಕೆ ಸೀಟನ್ನು ಆಯ್ಕೆ ಮಾಡಿಕೊಂಡ ಕೂಡಲೇ ನಿಗಮವು ಅಂತಹ ವಿದ್ಯಾರ್ಥಿಗೆ ಮುಂಚಿತವಾಗಿ ಸಾಲವನ್ನು ಮಂಜೂರು ಮಾಡುತ್ತದೆ. ಅಂತಹಾ ವಿದ್ಯಾರ್ಥಿಯು ಸಂಬಂಧ ಪಟ್ಟ ಕಾಲೇಜಿಗೆ ಪಾವತಿಸಬೇಕಾದ ಬೋಧನ ಶುಲ್ಕವನ್ನು ನಿಗಮವು ನೇರವಾಗಿ ಪಾವತಿಸುತ್ತದೆ.
ಅರಿವು (ನೀಟ್) ಯೋಜನೆ:
ವೈದಕೀಯ ಮತ್ತು ದಂತ ವೈದಕೀಯ ಕೋರ್ಸ್ ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾದಲ್ಲಿ ಅವರ ಬೋಧನಾ ಶುಲ್ಕದ ಸರಕಾರಿ ಸೀಟಿನ ಶೇ. 100ರಷ್ಟು ಅಥವಾ ಖಾಸಗೀ ಸೀಟ್ ಶೇ.50ರಷ್ಟು ಸಾಲವನ್ನು ಮಂಜೂರು ಮಾಡಲಾಗುತ್ತದೆ. ಮೇಲ್ಕಂಡ ಅರಿವು ಯೋಜನೆ ಸಾಲ ಪಡೆಯ ಬಯಸುವ ಅಭ್ಯರ್ಥಿಗಳು ವೆಬ್‌ಸೈಟ್ www.kmdc.kar.nic.in ಇದಕ್ಕೆ ಲಾಗಿನ್ ಮಾಡಿ ಕೊಳ್ಳಬೇಕು ಮತ್ತು ಅರ್ಜಿಯನ್ನು ಭರ್ತಿ ಮಾಡಬೇಕು. ಅರ್ಜಿಯ ಪ್ರಿಂಟ್ ಔಟ್ ತೆಗೆದು ಅಗತ್ಯ ದಾಖಲಾತಿಗಳೊಂದಿಗೆ ಕಚೇರಿಗೆ ಸಲ್ಲಿಸಬೇಕು.
ನವೀಕರಣ ಪ್ರಸ್ತಾವನೆಗೆ ಹಿಂದಿನ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಂಕಪಟ್ಟಿಯ ನಕಲು ಅಥವ ದೃಢೀಕರಣ ಪತ್ರ ಕಳೆದ ಸಾಲಿನಲ್ಲಿ ಸಾಲ ಬಿಡುಗಡೆಯಾಗಿರುವ ಅಭ್ಯರ್ಥಿಗಳಿಗೆ ಮಾತ್ರ 1, 2, 3, 4 ಮತ್ತು 5ನೇ ವರ್ಷದ ಸಾಲದ ಪ್ರಸ್ತಾವನೆ, ಅಭ್ಯರ್ಥಿಗಳಿಂದ ಸ್ವಯಂ ಲಿಖಿತ ಪಡೆದ ಅರ್ಜಿ ಮತ್ತು ಅದರ ಜೊತೆಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ದೃಢೀಕರಣ ಪತ್ರ ಮತ್ತು ಅಂಕಪಟ್ಟಿ ಹಾಗೂ ಈ ಹಿಂದೆ ನಿಗಮದಿಂದ ಬಿಡುಗಡೆ ಮಾಡುವ ಸಾಲದ ಮೊತ್ತಕ್ಕೆ ಶೇ. 10ರಷ್ಟು ಮತ್ತು ಶೇ. 2ರಷ್ಟು ಸೇವಾ ಶುಲ್ಕ ಸಾಲ ಮರು ಪಾವತಿ ಮಾಡಿದ ರಸೀದಿಯನ್ನು ಮೂಲ ಕಡತದ ಜೊತೆಗೆ ನಿಗಮಕ್ಕೆ ಕಳುಹಿಸಲು ಸೂಚಿಸಿದೆ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಯು ಹಿಂದಿನ ವರ್ಷಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಂಕಪಟ್ಟಿಯನ್ನು ಸಲ್ಲಿಸಬೇಕು ಅಂತಹಾ ವಿದ್ಯಾರ್ಥಿಗಳಿಗೆ ಮುಂದಿನ ಸಾಲದ ಕಂತು ಬಿಡುಗಡೆ ಮಾಡಲಾಗುವುದು.
ವಿದ್ಯಾರ್ಥಿಯು ಅಭ್ಯಾಸ ಮಾಡುವ ಕಾಲೇಜಿನ/ ಸಂಸ್ಥೆಯ ಬ್ಯಾಂಕ್ ಖಾತೆ, ಐಎಫ್‌ಎಸ್‌ಸಿ ಕೋಡ್ ಮತ್ತು ಈಮೇಲ್ ಐಡಿ ಹಾಗೂ ವಿದ್ಯಾರ್ಥಿಯ ಮೊಬೈಲ್ ನಂಬರ್ ಕಡ್ಡಾಯವಾಗಿ ಸಲ್ಲಿಸಬೇಕು.
ಕಿರುಸಾಲ ಯೋಜನೆ: ಈ ಯೋಜನೆಯಡಿ ಅಲ್ಪಸಂಖ್ಯಾತರು ಸಾಮಾನ್ಯವಾಗಿ ಅನಕ್ಷರಸ್ಥರಾಗಿದ್ದು, ಅಂತಹಾ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಕುಶಲ ಅಥವ ಕುಶಲವಲ್ಲದ ವ್ಯಕ್ತಿಗಳ ಅಭಿವೃದ್ಧಿಗಾಗಿ ಸಣ್ಣ ಪ್ರಮಾಣದ ವ್ಯಾಪಾರವನ್ನು ಮಾಡಲು ಸಾಲ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ.
ನಿಗಮದಿಂದ ಫಲಾನುಪೇಕ್ಷಿಗಳು ಸ್ವ-ಸಹಾಯ ಗಂಪುಗಳನ್ನು ಇತರ ಇಲಾಖೆಗಳ ಅಥವಾ ಸರಕಾರೇತರ ಸಂಸ್ಥೆಗಳ ಮೂಲಕ ಸಂಘಟನೆ ಮಾಡಿ ಸ್ವ-ಸಹಾಯ ಗುಂಪುಗಳ ಮೂಲಕ ಯೋಜನೆಯನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಬಹುದಾಗಿದೆ. ಸ್ವ-ಸಹಾಯ ಗುಂಪಿನ ಗಾತ್ರ 20 ಜನರಿಂದ 20 ಜನರವರೆಗೆ ಮಾತ್ರ ಮಿತಿಗೊಳಿಸಬೇಕಿದೆ.
ಸ್ವ-ಸಹಾಯ ಗುಂಪು ಕನಿಷ್ಠ ಒಂದು ವರ್ಷದಿಂದ ಕಾರ್ಯನಿರ್ವಸುತ್ತಿರಬೇಕು ಮತ್ತು ಸ್ವ-ಸಹಾಯ ಸಂಘದ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಒಂದು ವರ್ಷವಾಗಿರಬೇಕು. ಸ್ವಸಹಾಯ ಸಂಘವು ಆರ್ಥಿಕ ಚಟುವಟಿಕೆಗಳಲ್ಲಿ ಲಾಭದಲ್ಲಿರಬೇಕು. ಸ್ವಸಹಾಯ ಗುಂಪಿನ ಸದಸ್ಯರಾಗಿರುವ ಫಲಾನುಭವಿ ಜಮೀನು ಹೊಂದಿದ್ದಲ್ಲಿ ಅಥವಾ ಸರಕಾರಿ/ ಸರಕಾರಿ ಸಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದಲ್ಲಿ ಅವರಿಗೆ ಸಣ್ಣ ಪ್ರಮಾಣದ ಆರ್ಥಿಕ ಸಾಲ ಯೋಜನೆಯಡಿಯಲ್ಲಿ ಸಾಲ ಮಂಜೂರು ಮಾಡತಕ್ಕದ್ದು.
ಮೈಕ್ರೋ ಕ್ರೆಡಿಟ್ ಹಣಕಾಸು ಯೋಜನೆಯಡಿ ಮತ್ತು ಸ್ವಯಂ ಉದ್ಯೋಗ ಯೋಜನೆಯಡಿ ಶೇ. 50 ರಷ್ಟು ಸಹಾಯಧನ ಗರಿಷ್ಠ ರೂ. 5 ಸಾವಿರ ಪ್ರತಿ ಫಲಾನುಭವಿಗೆ ಫಲಾನುಭವಿಯ ಹೆಸರಿನಲ್ಲಿ ಮಂಜೂರು ಮಾಡಿ ಬಿಡುಗಡೆ ಮಾಡಿರುವ ಸಾಲವನ್ನು ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್‌ನಲ್ಲಿ ತೆರೆದಿರುವ ಖಾತೆಯ ಸಂಖ್ಯೆ ನಮೂದಿಸಿ ಚೆಕ್ಕುಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ. ಸ್ವಸಹಾಯ ಸಂಘಗಳು ಸಾಲವನ್ನು ಫಲಾನುಭವಿಗೆ ಶೇ.5ರ ಬಡ್ಡಿದರದಲ್ಲಿ ನೀಡಬೇಕು.
ಗಂಗಾಕಲ್ಯಾಣ ಯೋಜನೆ:
ಈ ಯೋಜನೆಯಡಿಯಲ್ಲಿ ಪ್ರಮುಖವಾಗಿ ವೈಯಕ್ತಿಕ ನೀರಾವರಿ ಯೋಜನೆಗಳಲ್ಲಿ ಉಚಿತವಾಗಿ ನೀರಾವರಿ ಸೌಲಭ್ಯ ಒದಗಿಸುವುದು. ಮತೀಯ ಅಲ್ಪಸಂಖ್ಯಾತ ವರ್ಗಗಳ ಸೇರಿದ ಸಣ್ಣ ಮತ್ತು ಅತೀ ಸಣ್ಣ ರೈತರು ಒಂದೇ ಕಡೆ ಕನಿಷ್ಠ 1 ಎಕರೆ ಒಣ ಜಮೀನಿಗೆ 2 ಲಕ್ಷ ರೂ.ಗಳ ಘಟಕ ವೆಚ್ಚದಲ್ಲಿ ಕೊಳವೆ ಬಾವಿ/ ತೆರೆದ ಬಾವಿ ಕೊರೆಯಿಸಿ ಪಂಪ್ ಸೆಟ್ ಮತ್ತು ಇತರ ಉಪಕರಣಗಳನ್ನು ಸರಬರಾಜು ಮಾಡಿ ಹಾಗೂ ಬೆಸ್ಕಾಂಗಳಿಗೆ ವೈಎಂಡಿ ಮತ್ತು ಇಎಂಡಿ ಹಣ ಪಾವತಿಸಿ ನೀರಾವರಿ ಸೌಲಭ್ಯ ಒದಗಿಸಲಾಗುವುದು.
ಪಶು ಸಂಗೋಪನ ಯೋಜನೆ: ಈ ಯೋಜನೆಯಡಿ ಪಶುಸಂಗೋಪನೆಗೆ ಉತ್ತೇಜನ ನೀಡಿ ಗ್ರಾಮೀಣ ಪ್ರದೇಶದ ಅಲ್ಪಸಂಖ್ಯಾತರು ನಿರಂತರ ಆದಾಯ ಹೊಂದುವ ಸಲುವಾಗಿ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಮುಂತಾದ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ನಡೆಸಲು ಶೇ. 50 ರಷ್ಟು ಸಹಾಯಧನ ಸೇರಿ 40 ಸಾರ ರೂ. ಘಟಕ ವೆಚ್ಚದಲ್ಲಿ ಸಹಾಯ ನೀಡಲಾಗುವುದು. ಈ ಯೋಜನೆಯಡಿ ಶೇ.10ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡಲಾಗುವುದು.
ಟ್ಯಾಕ್ಸಿ/ ಗೂಡ್ಸ್ ವಾಹನ ಖರೀದಿ ಯೋಜನೆ:-
ಈ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯದ ನಗರಗಳಲ್ಲಿ ಹಾಗೂ ಗ್ರಾಮೀಣ ಮಟ್ಟದಲ್ಲೂ ಸಹ ಹೆಚ್ಚಿನ ವಿದ್ಯಾಭ್ಯಾಸ ಪೂರೈಸಲು ಸಾಧ್ಯವಾಗದೆ ವಾಹನ ಚಾಲಕರಾಗಿ ತಮ್ಮ ನಿತ್ಯ ಜೀವನವನ್ನು ಸಾಗಿಸುತ್ತಿದ್ದಾರೆ. ಇಂತಹಾ ಆರ್ಥಿಕವಾಗಿ ಹಿಂದುಳಿದಿರುವ ಫಲಾನುಭವಿಗಳನ್ನು ಆಯ್ಕೆ ಮಾಡಿ ಇವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಉದ್ದೇಶದೊಂದಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಸಹಯೋಗದೊಂದಿಗೆ ಟ್ಯಾಕ್ಸಿ/ ಗೂಡ್ಸ್ ವಾಹನಗಳನ್ನು ಖರೀದಿಸಲು ಗರಿಷ್ಠ 3 ಲಕ್ಷ ಸಹಾಯಧನ ನೀಡಲಾಗುವುದು. ಈ ಯೋಜನೆಯಡಿಯಲ್ಲಿ ಖರೀದಿಸುವ ವಾಹನದ ಮೌಲ್ಯವು ಕನಿಷ್ಠ 4 ಲಕ್ಷದಿಂದ 7.50 ಲಕ್ಷಗಳಾಗಿರತಕ್ಕದ್ದು (ತೆರಿಗೆ ಹೊರತುಪಡಿಸಿ)
ಪ್ರವಾಸಿ ಸ್ವಯಂ ಉದ್ಯೋಗ ಯೋಜನೆ (ಕೇರಳ ಮಾದರಿ):
ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಕ್ಕೆ ತೆರಳಿ ನಂತರ ಹಿಂತಿರುಗಿ ಬರುವ ಉದ್ಯೋಗಾವಕಾಶ ವಂಚಿತರಾದ ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಹಾಗೂ ಆರ್ಥಿಕ ಸ್ಥಿತಿ ಉತ್ತಮ ಪಡಿಸಲು ರೂ. 10 ಲಕ್ಷಗಳ ಸಾಲವನ್ನು ಶೇ. 5 ರ ಬಡ್ಡಿ ದರದಲ್ಲಿ ಕೊಲೈಟರಲ್ ಭದ್ರತೆಯೊಂದಿಗೆ ನಿಗಮದಿಂದ ಸಾಲ ಸೌಲಭ್ಯ ನೀಡಲಾಗುವುದು. ನಿಗಮದಿಂದ ನೀಡಲಾಗಿರುವ ಸಾಲವನ್ನು 7 ವರ್ಷಗಳೊಳಗೆ ಮರುಪಾವತಿಸತಕ್ಕದ್ದು. ಒಮ್ಮೆ ಸಾಲ ಪಡೆದ ಫಲಾನುಭವಿಗಳು ಪುನಃ ಸಾಲ ಪಡೆಯಲು ಅವಕಾಶ ಇರುವುದಿಲ್ಲ. ಒಂದು ಮನೆಯ ಒಬ್ಬರಿಗೆ ಮಾತ್ರ ಅವಕಾಶ.
ಆಸಕ್ತ ಫಲಾಪೇಕ್ಷಿಗಳು ನಿಗದಿತ ಅರ್ಜಿಗಳನ್ನು ಹಾಗೂ ಹೆಚ್ಚುವರಿ ಮಾಹಿತಿಯನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನಾ ಆಝಾದ್ ಅಲ್ಪಸಂಖ್ಯಾತರ ಭವನ, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ, ಮಂಗಳೂರು 575001 ರವರಿಂದ ಪಡೆಯಬಹುದು. ಅಥವಾ ವೆಬ್‌ಸೆಟ್ www.kmdc.kar.nic.in ನಿಂದ ಅಥವಾ ಕಚೇರಿ ದೂರವಾಣಿ ಸಂಖ್ಯೆ 0824 - 2429044 ಸಂಪರ್ಕಿಸಲು ನಿಗಮದ ಜಿಲ್ಲಾ ವ್ಯವಸ್ಥಾಪಕರ ಪ್ರಕಟನೆ ತಿಳಿಸಿದೆ.







