ಬಾಲ್ಯ ವಿವಾಹ ಪಿಡುಗು: ಜಿಲ್ಲಾ ನ್ಯಾಯಾಧೀಶರ ಕಳವಳ
ಮಂಗಳೂರು, ಜೂ.18: ಸಮಾಜವು ಶೈಕ್ಷಣಿಕವಾಗಿ ಸಾಕಷ್ಟು ಮುಂದುವರಿದಿದ್ದರೂ ಬಾಲ್ಯ ವಿವಾಹದಂತ ಪಿಡುಗು ಈಗಲೂ ಕಂಡು ಬರುತ್ತಿರುವುದು ಕಳವಳಕಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಕೆ.ಎಸ್. ಬೀಳಗಿ ತಿಳಿಸಿದ್ದಾರೆ.
ಅವರು ಇತ್ತೀಚೆಗೆ ನಗರದ ಬಲ್ಮಠ ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಆಶ್ರಯದಲ್ಲಿ ನಡೆದ ‘ಬಾಲ್ಯವಾಹ ತಡೆ ಹಾಗೂ ಶಾಲೆ ಕಡೆ ನನ್ನ ನಡೆ’ ಜಾಗೃತಿ ಆಂದೋಲನ ಉದ್ಘಾಟಿಸಿ ಮಾತನಾಡಿದರು.
ಸರಕಾರ ಮಹಿಳಾ ಹಕ್ಕುಗಳ ರಕ್ಷಣೆಗೆ, ಹೆಣ್ಣು ಮಕ್ಕಳ ಗೌರವ ಹಾಗೂ ಘನತೆ ಎತ್ತಿ ಹಿಡಿಯಲು ಹಲವಾರು ಕಾರ್ಯಕ್ರಮಗಳನ್ನೂ ಏರ್ಪಡಿಸುತ್ತಿದೆ. ಬಾಲ್ಯ ವಿವಾಹ ವಿರುದ್ಧ ಹೋರಾಟ ಹೆಣ್ಣುಮಕ್ಕಳಿಂದ ಆರಂಭವಾಗಬೇಕಿದೆ. ಇದರಿಂದ ಸಮಾಜದಲ್ಲಿ ಮಹತ್ತರ ಬದಲಾವಣೆ ಸಾಧ್ಯವಿದೆ ಎಂದು ಅವರು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೋ ಮಾತನಾಡಿ, ಶಾಲಾ ಹಂತದಲ್ಲೇ ಬಾಲ್ಯ ವಿವಾಹ ವಿರುದ್ಧ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬರೂ ಶಿಕ್ಷಣ ಪಡೆದಾಗ ಬಾಲ್ಯವಿವಾಹದಂತಹ ಪಿಡುಗು ದೂರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ಜಿ. ಸಂತೋಷ್ ಕುಮಾರ್, ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ವಕೀಲರ ಸಂಘದ ಕಾರ್ಯದರ್ಶಿ ದಿನಕರ್ ಶೆಟ್ಟಿ, ಬಿಇಓ ಮಂಜುಳಾ, ನಿಕೇಶ್ ಶೆಟ್ಟಿ, ಶ್ಯಾಮ ಮೊಯ್ಲಿ, ಕಾಲೇಜಿನ ಪ್ರಾಂಶುಪಾಲೆ ವನಿತಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಅಬ್ದುಲ್ ಖಾದರ್ ಸ್ವಾಗತಿಸಿದರು. ಮಂಗಳೂರು ನಗರ ಸಿಡಿಪಿಓ ಶೋಭಾ ಕಾರ್ಯಕ್ರಮ ನಿರೂಪಿಸಿದರು.







