ನೀವು ಬಾಯಿಯಿಂದ ಉಸಿರಾಡುತ್ತೀರಾ...?
ಲೈಫ್ ಸ್ಟೈಲ್
ಉಸಿರಾಟದ ಸಮಸ್ಯೆಗಳು ತುಂಬ ತೊಂದರೆಯನ್ನು ನೀಡಬಲ್ಲವು. ಬಾಯಿಯ ಮೂಲಕ ಉಸಿರಾಟ ಈ ಸಮಸ್ಯೆಗಳಲ್ಲಿ ಒಂದು. ಮೂಗಿನ ಮೂಲಕ ಉಸಿರಾಟಕ್ಕೆ ಅಡಚಣೆಯಾದಾಗ ಅದು ಬಾಯಿಯ ಮೂಲಕ ಉಸಿರಾಟಕ್ಕೆ ಕಾರಣವಾಗಬಹುದು.
ವ್ಯಕ್ತಿ ಬಾಯಿಯ ಮೂಲಕ ಉಸಿರಾಡಿದಾಗ ಶರೀರಕ್ಕೆ ಸಾಕಷ್ಟು ಆಮ್ಲಜನಕ ದೊರೆಯುವುದಿಲ್ಲ. ಇದರಿಂದ ರಕ್ತದಲ್ಲಿನ ಆಮ್ಲಜನಕದ ಮಟ್ಟ ಕುಸಿಯಬಹುದು. ಹೀಗಾಗಿ ಬಾಯಿಯ ಮೂಲಕ ಉಸಿರಾಟವನ್ನು ಅಪಾಯಕಾರಿಯೆಂದು ಪರಿಗಣಿಸ ಲಾಗಿದೆ.
ಬಾಯಿಯ ಮೂಲಕ ಉಸಿರಾಟ ಹೃದಯ ಸಮಸ್ಯೆಗಳಿಗೆ ಮತ್ತು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಇಲ್ಲಿವೆ ಬಾಯಿಯ ಮೂಲಕ ಉಸಿರಾಟದ ಕೆಲವು ಸಮಸ್ಯೆಗಳು.
ಬಾಯಿಯ ಮೂಲಕ ಉಸಿರಾಟ ನಿದ್ರೆಯ ಮೇಲೂ ಪರಿಣಾಮ ಬೀರಬಲ್ಲುದು. ಅದು ಆಲಸ್ಯತನಕ್ಕೆ ಕಾರಣವಾಗುವ ಜೊತೆಗೆ ನಿಮ್ಮ ಶರೀರಕ್ಕೆ ಆಮ್ಲಜನಕ ಪೂರೈಕೆಯನ್ನು ಕಡಿಮೆ ಮಾಡಬಹುದು.
ಮೂಗಿನ ಮೂಲಕ ಉಸಿರಾಟಕ್ಕೆ ತಡೆ ಹೇಗಾಗುತ್ತದೆ? ಉಸಿರು ಸಾಗುವ ದಾರಿ ಯಲ್ಲಿನ ಹಿಗ್ಗಿದ ಅಡೆನಾಯ್ಡಿ ಗ್ರಂಥಿಗಳು ಮತ್ತು ಟಾನ್ಸಿಲ್ಗಳು, ಅಲರ್ಜಿಯಿಂದ ಮೂಗು ಸೋರುವಿಕೆ, ತಿರುಚಿದ ಮೂಗಿನ ಹೊಳ್ಳೆಗಳು ಮತ್ತು ಮೂಗಿನ ಸಂಯುಕ್ತಗಳು ಇದಕ್ಕೆ ಕಾರಣವಾಗಿರಬಹುದು. ವೈದ್ಯರು ಇದನ್ನು ನಿಖರವಾಗಿ ಪತ್ತೆ ಹಚ್ಚಬಲ್ಲರು.
ಈ ಅಡಚಣೆಗಳನ್ನು ನಿವಾರಿಸಿಕೊಂಡರೆ ಬಾಯಿಯ ಮೂಲಕ ಉಸಿರಾಟದ ಸಮಸ್ಯೆಯು ಬಗೆಹರಿಯುತ್ತದೆ. ಅಡಚಣೆಗಳ ನಿವಾರಣೆಯ ಬಳಿಕವೂ ವ್ಯಕ್ತಿ ಬಾಯಿಯ ಮೂಲಕವೇ ಉಸಿರಾಡಿಸುತ್ತಾನೆ ಎಂದರೆ ಅದು ಆತನ ಅಭ್ಯಾಸವಲ್ಲದೆ ಬೇರೇನೂ ಅಲ್ಲ. ಇಂತಹ ಸ್ಥಿತಿಯಲ್ಲಿ ಉಸಿರಾಟದ ವ್ಯಾಯಾಮ ಸಮಸ್ಯೆಯನ್ನು ನೀಗಿಸಬಲ್ಲುದು.
ಸಮಸ್ಯೆ ಇನ್ನೂ ಉಳಿದುಕೊಂಡರೆ ಶಸ್ತ್ರಚಿಕಿತ್ಸಕರನ್ನು ಸಂಪರ್ಕಿಸುವುದು ಉತ್ತಮ. ಅಡೆನಾಯ್ಡೆಗಳು,ಉಬ್ಬಿದ ಟಾನ್ಸಿಲ್ಗಳು ಮತ್ತು ಮೂಗಿನ ಸಂಯುಕ್ತವನ್ನು ತೆಗೆದು ಹಾಕಲು ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು.
ಕೆಲವು ಸಂದರ್ಭಗಳಲ್ಲಿ ಸಾಮಾನ್ಯ ಶೀತದಿಂದಲೂ ಮೂಗು ಕಟ್ಟಿಕೊಳ್ಳಬಹುದು ಮತ್ತು ಅನಿವಾರ್ಯವಾಗಿ ಬಾಯಿಯ ಮೂಲಕ ಉಸಿರಾಟ ನಡೆಸಬೇಕಾಗಬಹುದು.
ಕೆಲವರಲ್ಲಿ ಧೂಳು, ಪುಷ್ಪಪರಾಗದಿಂದ ಅಲರ್ಜಿಯುಂಟಾಗಿ ಮೂಗು ಸೋರುವಂತಾ ಗುತ್ತದೆ. ಹೀಗಾಗಿ ಇಂತಹ ಅಲರ್ಜಿಕಾರಕಗಳಿಂದ ದೂರವಿದ್ದರೆ ಬಾಯಿಯ ಮೂಲಕ ಉಸಿರಾಟದ ಸಮಸ್ಯೆ ಕಡಿಮೆಯಾಗಬಹುದು. ಸಲೈನ್ ದ್ರಾವಣವನ್ನು ಬಳಸಿ ಮೂಗನ್ನು ಶುದ್ಧಗೊಳಿಸುವುದು ಕೂಡ ಒಂದು ಉತ್ತಮ ಉಪಾಯವಾಗಿದೆ.
ಅರಿಷಿಣ ಬೆರೆತ ಹಾಲು ಸೇವನೆಯೂ ಬಾಯಿಯ ಮೂಲಕ ಉಸಿರಾಟದ ಸಮಸ್ಯೆ ಯನ್ನು ಕಡಿಮೆಗೊಳಿಸುತ್ತದೆ. ಅರಿಷಿಣವು ಉರಿಯೂತ ನಿವಾರಕವಾಗಿದ್ದು, ಅದು ಅಲರ್ಜಿಗಳ ವಿರುದ್ಧವೂ ಹೋರಾಡುತ್ತದೆ. ಅದು ಹಿಸ್ಟಾಮೈನ್ ಮಟ್ಟವನ್ನು ಕನಿಷ್ಠ ಗೊಳಿಸುತ್ತದೆ. ಮೊಸರು ಸೇವನೆಯು ಶೀತ ಮತ್ತು ಪುಷ್ಪಪರಾಗದಿಂದ ಉಂಟಾಗುವ ಅಲರ್ಜಿಗಳನ್ನು ನಿವಾರಿಸುತ್ತದೆ.