94ಸಿ, 94ಸಿಸಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: ತಹಶೀಲ್ದಾರ್
ಉಡುಪಿ ತಾಲೂಕು ಪಂಚಾಯತ್ ಸಾಮಾನ್ಯಸಭೆ

ಉಡುಪಿ, ಜೂ.19: ಹಕ್ಕುಪತ್ರಕ್ಕಾಗಿ 94 ಸಿ ಮತ್ತು 94ಸಿಸಿ ಕಾಯಿದೆಯಡಿ ಅರ್ಜಿ ಸಲ್ಲಿಸುವ ಅವಧಿಯನ್ನು ಮೂರು ತಿಂಗಳು ಕಾಲ ಅಂದರೆ ಸೆ.12ರವರೆಗೆ ವಿಸ್ತರಿಸಲಾಗಿದೆ ಎಂದು ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ತಿಳಿಸಿದ್ದಾರೆ.
ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಸುಧೀರ್ ಶೆಟ್ಟಿ ಅವರ ಪ್ರಶ್ನೆಗೆ ಅವರು ಉತ್ತರಿಸಿದರು. ಬ್ರಹ್ಮಾವರದ ನಾಲ್ಕು ಗ್ರಾಪಂ ವ್ಯಾಪ್ತಿಯ ಎಸ್‌ಸಿಎಸ್‌ಟಿ ಕುಟುಂಬಗಳು 94ಸಿಸಿಯಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಒಂದು ವರ್ಷಗಳಾ ದರೂ ಅದಕ್ಕೆ ಇನ್ನೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹಕ್ಕುಪತ್ರ ಇಲ್ಲದೆ ಆ ಕುಟುಂಬಗಳಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಸುಧೀರ್ ಶೆಟ್ಟಿ ದೂರಿದರು.
ಇದಕ್ಕೆ ಉತ್ತರಿಸಿದ ತಹಶೀಲ್ದಾರ್, 94ಸಿಸಿಯಲ್ಲಿ ಎಷ್ಟು ಸೆಂಟ್ಸ್ ಜಾಗಕ್ಕೆ ಹಕ್ಕುಪತ್ರ ನೀಡಬೇಕೆಂಬ ಗೊಂದಲದಿಂದಾಗಿ ಅರ್ಜಿ ವಿಲೇವಾರಿ ವಿಳಂಬ ವಾಗಿದೆ. ಈಗ ನಗರಸಭೆ, ಪುರಸಭೆ ವ್ಯಾಪ್ತಿಯ 94ಸಿಸಿ ಅರ್ಜಿದಾರರಿಗೆ ಒಂದು ಕಾಲು ಸೆಂಟ್ಸ್ ಮತ್ತು ಅದರಿಂದ ಐದು ಕಿ.ಮೀ. ವ್ಯಾಪ್ತಿಯ ಗ್ರಾಪಂ ವ್ಯಾಪ್ತಿಯ ಅರ್ಜಿದಾರರಿಗೆ ಮೂರು ಸೆಂಟ್ಸ್ ಜಾಗಕ್ಕೆ ಹಕ್ಕುಪತ್ರ ನೀಡಲು ಸರಕಾರ ಆದೇಶ ನೀಡಿದೆ. 94 ಸಿಯಲ್ಲಿ ಈವರೆಗೆ 210 ಹಕ್ಕುಪತ್ರಗಳನ್ನು ನೀಡಲಾಗಿದೆ ಎಂದರು.
94ಸಿಯಲ್ಲಿ ಹಕ್ಕುಪತ್ರಕ್ಕಾಗಿ ಸಲ್ಲಿಸಿರುವ ಅರ್ಜಿಯನ್ನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯ ನೆಪ ಹೇಳಿ ತಿರಸ್ಕರಿಸಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ತೊಂದರೆಯಾಗಿದೆ ಎಂದು ಡಾ.ಸುನೀತಾ ಶೆಟ್ಟಿ ದೂರಿದರು. ಈ ಬಗ್ಗೆ ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು ಅಧಿಕಾರಿ ಉತ್ತರಿಸಿದರು.
ಕೈಗಾರಿಕಾ ವಲಯಕ್ಕೆ ವಿರೋಧ: ಉದ್ಯಾವರದಲ್ಲಿ ಫಿಶ್‌ಮಿಲ್ ಸ್ಥಾಪನೆ ಗಾಗಿ ಪಿತ್ರೋಡಿಯ ನಿವೇಶನವನ್ನು ಕೈಗಾರಿಕಾ ವಲಯವನ್ನಾಗಿ ಪರಿವರ್ತಿಸ ಬೇಕೆಂಬ ಅರ್ಜಿಯನ್ನು ತಿರಸ್ಕರಿಸುವ ಬಗ್ಗೆ ಉದ್ಯಾವರ ಗ್ರಾಪಂನಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಅದೇ ರೀತಿಯ ನಿರ್ಣಯವನ್ನು ತಾಲೂಕು ಪಂಚಾ ಯತ್‌ನಲ್ಲೂ ತೆಗೆದುಕೊಳ್ಳಬೇಕು ಎಂದು ಸದಸ್ಯೆ ರಜನಿ ಸಭೆಯಲ್ಲಿ ಮನವಿ ಮಾಡಿದರು.
ಈ ಕುರಿತು ಗ್ರಾಮಸ್ಥರಿಂದ ತಾಪಂಗೂ ಪತ್ರ ಬಂದಿದ್ದು, ಇಂತಹ ಕೈಗಾರಿಕೆ ಗಳಿಂದ ಜನರಿಗೆ ತೊಂದರೆ ಆಗುವುದರಿಂದ ಅದಕ್ಕೆ ಅನುಮತಿ ನೀಡದಂತೆ ತಾಪಂನಿಂದಲೂ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ತಿಳಿಸಿದರು.
ಅಂಜಾರು ಗ್ರಾಮದ ಕೊಂಟು ಎಂಬಲ್ಲಿ ನಿರ್ಮಿಸುತ್ತಿರುವ ಬಸ್ ನಿಲ್ದಾಣ ಈವರೆಗೆ ಪೂರ್ಣ ಆಗಿಲ್ಲ. ಅರ್ಧಕ್ಕೆ ನಿಲ್ಲಿಸಿರುವ ಈ ನಿಲ್ದಾಣಕ್ಕೆ ಆಗಿರುವ ವೆಚ್ಚ ಎಷ್ಟು ಎಂಬುದರ ಬಗ್ಗೆ ಮಾಹಿತಿ ಕೇಳಿದರೂ ಕೊಡುತ್ತಿಲ್ಲ ಎಂದು ಲಕ್ಷ್ಮಿ ನಾರಾಯಣ ಪ್ರಭು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವ ಹಣಾಧಿಕಾರಿ, ಈ ಬಗ್ಗೆ ಒಂದು ವಾರದೊಳಗೆ ಮಾಹಿತಿ ಪಡೆದು ನೀಡಲಾಗು ವುದು ಎಂದು ತಿಳಿಸಿದರು.
ಇತ್ತೀಚೆಗೆ ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕೊಕ್ಕರ್ಣೆ- ಸಂತೆಕಟ್ಟೆ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರು ರಸ್ತೆ ಯಲ್ಲೇ ಹರಿದು ರಸ್ತೆ ಹಾಳಾಗುತ್ತಿದೆ. ಇದರ ಬಗ್ಗೆ ಕೂಡಲೇ ಕ್ರಮ ತೆಗೆದು ಕೊಳ್ಳಬೇಕು ಎಂದು ಭುಜಂಗ ಶೆಟ್ಟಿ ಒತ್ತಾಯಿಸಿದರು.
ಪರಿಹಾರಕ್ಕೆ ನೀಡಲು ಆಗ್ರಹ: ಪಾದೂರು ಪೈಪ್‌ಲೈನ್ ಯೋಜನೆ ಯಿಂದ ಹಾನಿಗೊಳಗಾದ ಪಾದೂರು ಹಾಗೂ ಕಳತ್ತೂರು ಗ್ರಾಮದ 46 ಮನೆ ಗಳಿಗೆ ಈಗಾಗಲೇ 48ಲಕ್ಷ ರೂ. ಪರಿಹಾರವನ್ನು ನೀಡಲಾಗಿದೆ. ಅದೇ ರೀತಿ ಇನ್ನು ಹಲವು ಮನೆಗಳಿಗೆ ಹಾನಿಯಾಗಿದ್ದು, ಆ ಬಗ್ಗೆ ಪರಿಶೀಲಿಸಿ ಕೂಡಲೇ ಪರಿಹಾರ ಮೊತ್ತವನ್ನು ನೀಡಬೇಕು ಎಂದು ಸದಸ್ಯೆ ಶಶಿಪ್ರಭಾ ಶೆಟ್ಟಿ ಆಗ್ರಹಿಸಿದರು.
ಆವರ್ಸೆ ಜಾನುವಾರುಕಟ್ಟೆಯ ಶಾಲೆಯ ಐದು ಮಂದಿ ಶಿಕ್ಷಕಿಯರ ಮಧ್ಯೆ ಹೊಂದಾಣಿಕೆ ಇಲ್ಲದೆ ಮಕ್ಕಳು ತೊಂದರೆಗೆ ಒಳಗಾಗುತ್ತಿದ್ದಾರೆ. ಆದುದರಿಂದ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಸದಸ್ಯೆ ನಿರ್ಮಲಾ ಶೆಟ್ಟಿ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ, ಮೊದಲು ಮೂರು ಶಿಕ್ಷಕಿಯರು ಅಂತ ಹೇಳಲಾಗಿತ್ತು. ಇದೀಗ ಐದು ಶಿಕ್ಷಕಿ ಯರು ಎಂಬುದಾಗಿ ದೂರಲಾಗುತ್ತಿದೆ. ಈ ಬಗ್ಗೆ ಗ್ರಾಪಂ ತೆಗೆದುಕೊಳ್ಳುವ ನಿರ್ಣಯದಂತೆ ಶಿಕ್ಷಕಿಯರನ್ನು ಅಲ್ಲಿಂದ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 2016-17ನೆ ಸಾಲಿನ ವಿಶೇಷ ಘಟಕ ಯೋಜನೆಯಡಿ ಮಂಜೂರಾದ ಬಾಕ್ಸ್‌ಗಳನ್ನು 24 ಮೀನುಗಾರರಿಗೆ ವಿತರಿಸಲಾಯಿತು. ನಿವೃತ್ತ ರಾಗುತ್ತಿರುವ ತಾಪಂ ಸಿಬ್ಬಂದಿ ಲೀಲಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ತಾಪಂ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷೆ ನೀತಾ ಗುರುರಾಜ್ ಉಪಸ್ಥಿತರಿದ್ದರು.
ದಲಿತರನ್ನು ಟಾರ್ಗೆಟ್ ಮಾಡಬೇಡಿ!
ಹೆಗ್ಗುಂಜೆ ಗ್ರಾಪಂ ವ್ಯಾಪ್ತಿಯಲ್ಲಿ ಶೇ.100ರಷ್ಟು ನೀರಿನ ಮೀಟರ್ ಅಳ ವಡಿಸಿ ಬಿಲ್ ಸಂಗ್ರಹಿಸುತ್ತಿದ್ದರೂ ನೀರಿನ ಸಮಸ್ಯೆಯನ್ನು ಗ್ರಾಮಸ್ಥರು ಎದುರಿ ಸುತ್ತಿದ್ದಾರೆ. ಇದಕ್ಕೆ ಕಾರಣ ಅಲ್ಲಿನ ಪಂಪ್ ಆಪರೇಟರ್. ದಲಿತ ವರ್ಗಕ್ಕೆ ಸೇರಿದ ಇವರು ಕಳೆದ 25ವರ್ಷಗಳಿಂದ ಗ್ರಾಪಂ ನೌಕರರಾಗಿ ಕೆಲಸ ನಿರ್ವಹಿ ಸುತ್ತಿದ್ದಾರೆ. ಆದರೆ ಈಗ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ನಾವು ಕ್ರಮದ ಬಗ್ಗೆ ಮಾತನಾಡಿದರೆ ನಮಗೆ ನೋಟೀಸ್ ಜಾರಿ ಮಾಡುವಂತೆ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅವಕಾಶ ನೀಡಬೇಕು ಎಂದು ಗ್ರಾಪಂ ಅಧ್ಯಕ್ಷ ಗಣೇಶ್ ಶೆಟ್ಟಿ ಸಭೆಯಲ್ಲಿ ತಿಳಿಸಿದರು.
ಇದಕ್ಕೆ ಉತ್ತರಿಸಿದ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ, ಪಂಪ್ ಆಪ ರೇಟರ್‌ಗಳು ಗ್ರಾಪಂ ನೌಕರರಾಗಿರುವುದರಿಂದ ಗ್ರಾಪನಿಂದಲೇ ನಿರ್ಣಯ ಮಾಡಿ ಜಿಪಂಗೆ ಕಳುಹಿಸಿಕೊಡಬೇಕೆಂದರು. ಈ ಮಧ್ಯೆ ಸದಸ್ಯ ಧನಂಜಯ್, ನೀವು ದಲಿತ ವರ್ಗದ ಸಿಬ್ಬಂದಿಗಳನ್ನು ಟಾರ್ಗೆಟ್ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ವಾಗ್ವಾದಗಳು ನಡೆದವು. ಅಧ್ಯಕ್ಷರು ಮಧ್ಯೆ ಪ್ರವೇಶಿಸಿ ಆ ವಿಷಯವನ್ನು ಅಲ್ಲಿಗೆ ಮುಗಿಸಿದರು.
ರಸಗೊಬ್ಬರ ಕೊರತೆ ಇಲ್ಲ
ತಾಲೂಕಿನಲ್ಲಿ ರಸಗೊಬ್ಬರ ದಾಸ್ತಾನು ಇರುವ ಕುರಿತ ಸದಸ್ಯ ಭುಜಂಗ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಕೃಷಿ ಅಧಿಕಾರಿ, ರಸಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಸುಣ್ಣ, ಯೂರಿಯಗಳು ಖಾಸಗಿ ಡೀಲರ್ ಮತ್ತು ಸಹಕಾರಿ ಸಂಘಗಳಲ್ಲಿ ಬೇಕಾದಷ್ಟು ದಾಸ್ತಾನು ಇದ್ದು, ಯಾವುದೇ ಕೊರತೆ ಇಲ್ಲ. ಅದಕ್ಕೆ ಈಗಾಗಲೇ ದರ ನಿಗದಿ ಪಡಿಸಲಾಗಿದೆ. ಈ ಎಲ್ಲ ಡೀಲರ್‌ಗಳಿಗೆ ಬಿಲ್ಲಿಂಗ್ ಮಿಶಿನ್‌ಗಳನ್ನು ಕಡ್ಡಾಯಗೊಳಿಸಲಾಗಿದ್ದು, ಈಗಾಗಲೇ 12 ಮಂದಿಗೆ ವಿತರಿಸಲಾಗಿದೆ. ಇದರ ಬೆಲೆ 28ಸಾವಿರ ರೂ. ಆದರೆ ಎಂಸಿಎಫ್‌ನವರು ಉಚಿತವಾಗಿ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.







