ಜೂ.21ರಂದು ಪೌರಕಾರ್ಮಿಕರಿಗೆ 17 ಸಾವಿರ ವೇತನ ನೀಡಲು ಆದೇಶ: ಕೆ.ಜೆ.ಜಾರ್ಜ್

ಬೆಂಗಳೂರು, ಜೂ.19: ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಕನಿಷ್ಠ 17 ಸಾವಿರ ರೂ.ವೇತನ ನೀಡಲು ಚಿಂತನೆ ನಡೆಸಲಾಗಿದ್ದು, ಈ ಸಂಬಂಧ ನಾಳೆ(ಜೂ.21ರಂದು) ಆದೇಶ ಹೊರಡಿಸಲಾಗುವುದೆಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಇಂದಿಲ್ಲಿ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಗಾಂಧಿನಗರದ ನ್ಯಾಷನಲ್ ಮಾರ್ಕೆಟ್ ವಾಣಿಜ್ಯ ಸಂಕೀರ್ಣದಲ್ಲಿ ಬಿಬಿಎಂಪಿ ವತಿಯಿಂದ ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆ ಅಡಿಯಲ್ಲಿ ಸ್ವಚ್ಛ ಮತ್ತು ಆರೋಗ್ಯಕರ ನಗರಕ್ಕಾಗಿ ‘ಜೋಡಿ ಕಸದ ಡಬ್ಬಗಳ ಅಳವಡಿಕೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿಲಿಕಾನ್ ಸಿಟಿ ಬೆಂಗಳೂರು ಸ್ವಚ್ಛವಾಗಿರಲು ನಮ್ಮ ಪೌರ ಕಾರ್ಮಿಕರೇ ಕಾರಣ. ಆದರೆ, ಗುತ್ತಿಗೆ ಆಧಾರದಲ್ಲಿ ಅವರಿಗೆ 5 ಸಾವಿರ ರೂಪಾಯಿ ಮಾತ್ರ ಮಾಸಿಕ ವೇತನ ನೀಡಲಾಗುತ್ತಿದೆ. ಈ ಬಗ್ಗೆ ಸರಕಾರವೂ ಚಿಂತನೆ ನಡೆಸಿ, ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಹಾಗೂ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ಸಭೆ ನಡೆಸಿದೆ. ಸಚಿವ ಸಂಪುಟ ಸಭೆಯಲ್ಲೂ ಕನಿಷ್ಠ ವೇತನ ನೀಡಲು ಎಲ್ಲರೂ ಒಪ್ಪಿದ್ದಾರೆ. ಹೀಗಾಗಿ, ಜೂ.21ರಂದು ಆದೇಶ ಹೊರಡಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಕ್ವಾರಿ ಮತ್ತೆ ಬಳಕೆ: ಬೆಂಗಳೂರಿನ ಹೆಣ್ಣೂರು ಸೇರಿ ಸುತ್ತಮುತ್ತ ನೂರಾರು ಎಕರೆ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆದು ಹಾಳಾಗಿದೆ. ಆದರೆ, ಈ ಬೃಹತ್ ಕ್ವಾರಿಯನ್ನು ತುಂಬಿಸಲು ನೂರಾರು ಕೋಟಿ ರೂಪಾಯಿ ಬೇಕು. ಹೀಗಾಗಿ, ಇದೇ ಜಾಗದಲ್ಲಿ ವೈಜ್ಞಾನಿಕವಾಗಿ ಆಟದ ಮೈದಾನ, ಪಾರ್ಕ್, ಸಾರ್ವಜನಿಕರ ಉಪಯೋಗಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಾರ್ಜ್ ಹೇಳಿದರು.
ನಗರದ ಹೊರವಲಯದಲ್ಲಿ ಕಸ ಸುರಿದು ಕೆಟ್ಟ ವಾಸನೆ ಬರುತ್ತಿದೆ ಎನ್ನುವ ದೂರುಗಳು ಬಂದಿವೆ. ಹೀಗಾಗಿ, ಕೃಷಿ ಇಲಾಖೆಯ ಸಹಯೋಗದೊಂದಿಗೆ ಈ ಸಮಸ್ಯೆ ಬಗೆಹರಿಸಲಾಗುವುದು. ಏಳು ಕಡೆ ಕಂಪೂಸ್ಟ್ ಮಾಡಲಾಗುತ್ತಿದೆ ಎಂದ ಅವರು, ಕೆಲ ಕಡೆ ಆರ್‌ಡಿಎಫ್ ಬರುತ್ತಿರುವ ಕಾರಣ ಇದರಿಂದ ವಿದ್ಯುತ್ ಶಕ್ತಿ ಉತ್ಪಾದಿಸಲು ಜರ್ಮನ್ ದೇಶದ ಕಂಪನಿಯೊಂದು ಮುಂದಾಗಿದೆ ಎಂದರು.
ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ ಮಾತನಾಡಿ, ಮುಖ್ಯಮಂತ್ರಿಗಳ ಪ್ರಸ್ತುತ ಸಾಲಿನ ನಗರೋತ್ಥಾನ ಯೋಜನೆಯಲ್ಲಿ 2,232 ಬೀದಿ ಕಸ ಸಂಗ್ರಹಿಸುವ ಜೋಡಿ ಡಬ್ಬಗಳನ್ನು ಖರೀದಿಸಿ ಅಳವಡಿಸಲು 415.66 ಲಕ್ಷ ಅನುದಾನ ಮೀಸಲಿಟ್ಟಿದೇವೆ. ಇದನ್ನು ಜನಸಂದಣಿ ಪ್ರದೇಶಗಳಲ್ಲಿ, ವಾಣಿಜ್ಯ, ಮಾರುಕಟ್ಟೆ, ಕೊಳಚೆ, ಮುಖ್ಯರಸ್ತೆ, ಪಾದಚಾರಿ ರಸ್ತೆಗಳಲ್ಲಿ ಉಪಯೋಗಿಸಲಾಗುವುದೆಂದರು.
ಪ್ರತಿಯೊಂದು ಅಂಗಡಿ ಮಾಲಕರು ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಮುಂದಾಗಬೇಕು. ಅಲ್ಲದೆ, ಮುಂಜಾನೆ ಪಾಲಿಕೆ ಪೌರ ಕಾರ್ಮಿಕರು ಬಂದು ರಸ್ತೆಯನ್ನು ಸ್ವಚ್ಛ ಮಾಡಿ ಹೋದ ಬಳಿಕ ಅಂಗಡಿ ಮಾಲಕರು, ಗ್ರಾಹಕರು ರಸ್ತೆಯಲ್ಲಿಯೇ ಕಸ ಬಿಸಾಡುವುದು ಒಳ್ಳೆಯ ಪದ್ಧತಿಯಲ್ಲ. ಎಲ್ಲರೂ ಸ್ವಚ್ಛತೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಗಾಂಧೀನಗರ ವಿಧಾನಸಭಾ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಜನ ಇರುವ ಪ್ರದೇಶ ಎಂದರೆ ಅದು ಗಾಂಧೀನಗರ. ಪಾಲಿಕೆಯಿಂದ ಕಸದ ಡಬ್ಬಗಳನ್ನು ಅಳವಡಿಕೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಸಾರ್ವಜನಿಕರಿಗೆ ಕಸ ಎಲ್ಲಿ ಹಾಕಬೇಕು ಎನ್ನುವ ಕಿರಿಕಿರಿ ದೂರವಾಗಲಿದೆ ಎಂದರು.
90ರ ದಶಕದಲ್ಲಿ ಮನೆ ಬಾಗಿಲಿಗೆ ಬಂದು ಕಸ ತೆಗೆದುಕೊಂಡು ಹೋಗುವ ಯೋಜನೆಯನ್ನು ಆರಂಭಿಸಿದ್ದರು. ಈಗಲೂ ಇದು ನಡೆಯುತ್ತಿದೆ ಎಂದ ಅವರು, ರಾಜ್ಯ ಸರಕಾರ ಮತ್ತು ಬಿಬಿಎಂಪಿ ಅನೇಕ ಜನಪರ ಕೆಲಸಗಳನ್ನು ಮಾಡಿದೆ. ಆದರೆ, ಇದನ್ನು ಯಾರು ಹೇಳುತ್ತಿಲ್ಲ. ಹೆಚ್ಚಾಗಿ ಟೀಕೆಗಳನ್ನೆ ಮಾಡಲಾಗುತ್ತಿದೆ ಎಂದು ದಿನೇಶ್‌ಗುಂಡೂರಾವ್ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪಮೇಯರ್ ಎಂ.ಆನಂದ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ್‌ಕುಮಾರ್, ಆಡಳಿತ ಪಕ್ಷದ ನಾಯಕ ಮುಹಮ್ಮದ್ ರಿಝ್ವಾನ್ ನವಾಬ್, ಸದಸ್ಯರಾದ ಲತಾಕುವರ್ ರಾಥೋಡ್, ಆರ್.ರಮಿಳಾ ಉಮಾಶಂಕರ್, ಹೇಮಲತಾ,ರಾಧಾವೆಂಕಟೇಶ್, ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, ಅಧಿಕಾರಿಗಳಾದ ವಿಜಯ್, ಸರ್ಫರಾಜ್‌ಖಾನ್ ಸೇರಿ ಪ್ರಮುಖರು ಪಾಲ್ಗೊಂಡಿದ್ದರು.







