ಅಂಗನವಾಡಿಗಳಿಗೆ ಎಸಿ ಅಳವಡಿಕೆ ಇಲ್ಲ: ಮೀನಾಕ್ಷಿ ಶಾಂತಿಗೋಡು

ಮಂಗಳೂರು, ಜೂ.19: ಜಿಲ್ಲೆಯ ಅಂಗನವಾಡಿಗಳಿಗೆ ಇನ್ನು ಮುಂದೆ ಎಸಿ ಅಳವಡಿಸುವುದಿಲ್ಲ. ಆ ಪ್ರಸ್ತಾವವೇ ಜಿಪಂ ಮುಂದೆ ಇಲ್ಲ ಎಂದು ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.
ಸೋಮವಾರ ಜಿಪಂ ಮಿನಿ ಹಾಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜಿಪಂನ 28 ಇಲಾಖೆಗಳಲ್ಲಿ ಸಾಕಷ್ಟು ಯೋಜನೆಗಳು ಅನುಷ್ಠಾನಗೊಳ್ಳುತ್ತಿದೆ. ಅದರಲ್ಲಿ ಕೇಂದ್ರ ಸರಕಾರದ ಸ್ವಚ್ಛತಾ ಕಾರ್ಯಕ್ರಮವು ಆಂದೋಲನ ರೂಪದಲ್ಲಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿದೆ ಎಂದರು.
ಜಿಲ್ಲೆಯ ಸರಕಾರಿ ಶಾಲೆಗಳ ದುರಸ್ತಿ, ಶಿಕ್ಷಕರ ನೇಮಕಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ತಲಾ 5 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಇಂಗು ಗುಂಡಿ ತೋಡುವ ಮೂಲಕ ನೀರಿಂಗಿಸುವಿಕೆಗೆ ಚಾಲನೆ ನೀಡಲಾಗಿದೆ. ಅಂತರ್ಜಲ ಮಟ್ಟ ಹೆಚ್ಚಿಸಲು ಆದ್ಯತೆ ನೀಡಲಾಗಿದೆ. ಅದಕ್ಕಾಗಿ ಪ್ರತಿಯೊಬ್ಬರು ಮನೆ ಕಟ್ಟುವಾಗ ತೆರೆದ ಬಾವಿ ಕೊರೆಯಲು ಸೂಚಿಸಲಾಗುತ್ತಿದೆ ಎಂದು ಮೀನಾಕ್ಷಿ ಶಾಂತಿಗೋಡು ಹೇಳಿದರು.
ಜಿಲ್ಲೆಯಲ್ಲಿ ಸ್ವಚ್ಛತಾ ಆಂದೋನಲಕ್ಕೆ ಆದ್ಯತೆ ನೀಡಲಾಗುತ್ತಿದೆ ಎನ್ನುತ್ತೀರಿ. ಆದರೆ ಫ್ಲೆಕ್ಸ್, ಬ್ಯಾನರ್‌ಗೆ ಕಡಿವಾಣ ಹಾಕುತ್ತಿಲ್ಲ. ಅದಿನ್ನೂ ರಾರಾಜಿಸುತ್ತಿದೆ. ಯಾಕೆ ಹೀಗೆ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಈಗಾಗಲೆ ಸುತ್ತೋಲೆ ಕಳುಹಿಸಲಾಗಿದೆ. ಶೀಘ್ರ ಮರುಸುತ್ತೋಲೆ ಕಳುಹಿಸಲಾಗುವುದು ಎಂದರು.
ಎಸಿ ಅಳವಡಿಕೆ ಇಲ್ಲ: ಜಿಲ್ಲೆಯಲ್ಲಿ 2,104 ಅಂಗನವಾಡಿ ಕೇಂದ್ರಗಳಿವೆ. ಆ ಪೈಕಿ ಕೇವಲ 4 ಕೇಂದ್ರಗಳಿಗೆ ಮಾತ್ರ ಎಸಿ ಅಳವಡಿಕೆ ಮಾಡಲಾಗಿದೆ. ಈ ತಾರತಮ್ಯ ಯಾಕ? ಜಿಪಂನಲ್ಲಿ ನಿರ್ಣಯ ಆಗದೆ ಕೇವಲ 4 ಕೇಂದ್ರಗಳಿಗೆ ಎಸಿ ಅಳವಡಿಸಿರುವುದು ಎಷ್ಟು ಸರಿ? ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಸಿಎಸ್‌ಆರ್ ನಿಧಿಯಿಂದ ಬಿಡುಗಡೆಯಾದ ಹಣದಿಂದ ಮಾಡಲಾಗಿದೆ. ಈ ಬಗ್ಗೆ ನಾನು ಆರಂಭದಲ್ಲೇ ಜಿಪಂ ಸಿಇಒ ಜೊತೆ ಚರ್ಚಿಸಿ ಎಸಿ ಬದಲು ಬೇರೆ ಸೌಕರ್ಯ ಕಲ್ಪಿಸಲು ಸೂಚಿಸಿದ್ದೆ. ಆದರೂ ಎಸಿ ಅಳವಡಿಸಲಾಗಿದೆ. 2,104 ಅಂಗನವಾಡಿಗಳಿಗೆ ಎಸಿ ಅಳವಡಿಸುವುದು ಅಸಾಧ್ಯ. ತಾರತಮ್ಯ ನೀತಿಯನ್ನು ತಪ್ಪಿಸುವ ಸಲುವಾಗಿ ಮುಂದೆ ಯಾವುದೇ ಅಂಗನವಾಡಿಗಳಿಗೆ ಎಸಿ ಅಳವಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿಪಕ್ಷದ ಸಹಕಾರ: ತಮ್ಮ ಆಡಳಿತಾವಧಿಯಲ್ಲಿ ಪ್ರತಿಪಕ್ಷದ ಸಹಕಾರ ಹೇಗೆ ಇತ್ತು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೀನಾಕ್ಷಿ ಶಾಂತಿಗೋಡು ಎಲ್ಲರ ಸಹಕಾರದಿಂದ ಈವರೆಗೆ ಉತ್ತಮ ಆಡಳಿತ ನೀಡಲಾಗಿದೆ ಎಂದರು.
ಉತ್ತರಿಸಲು ತಡಕಾಡಿದ ಅಧ್ಯಕ್ಷೆ: ಜಿಪಂ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕರೆಯಲಾದ ಈ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತಡಕಾಡಿದರು. ಎಂಡೋಸಲ್ಫಾನ್ ಸಂತ್ರಸ್ತರ ಕುರಿತು ನೀಡಲಾದ ಅಂಕಿ ಅಂಶ ಕೂಡ ತಪ್ಪಿನಿಂದ ಕೂಡಿದೆ ಎಂದು ಪತ್ರಕರ್ತರು ಬೊಟ್ಟು ಮಾಡಿದಾಗಲೂ ಉತ್ತರ ಶೂನ್ಯವಾಗಿತ್ತು.
ಸುದ್ದಿಗೋಷ್ಠಿಯಲ್ಲಿ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಪಂ ಕಾರ್ಯದರ್ಶಿ ಎನ್. ಆರ್. ಉಮೇಶ್ ಉಪಸ್ಥಿತರಿದ್ದರು.







