ಮೇಲ್ಮನೆಯಲ್ಲೂ ಜಿಎಸ್ಟಿ ವಿಧೇಯಕ ಅಂಗೀಕಾರ

ಬೆಂಗಳೂರು, ಜೂ.19: ಏಕರೂಪ ತೆರಿಗೆ ಪದ್ಧತಿ ಜಾರಿಗೊಳಿಸುವ ಮಹತ್ವದ ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ವಿಧೇಯಕ(ಜಿಎಸ್ಟಿ)ವನ್ನು ವಿಧಾನ ಪರಿಷತ್‌ನಲ್ಲೂ ಧ್ವನಿಮತದ ಮೂಲಕ ಸರ್ವಾನುಮತದಿಂದ ಅಂಗೀಕಾರ ನೀಡಲಾಯಿತು.
ಸೋಮವಾರ ವಿಧಾನ ಪರಿಷತ್‌ನಲ್ಲಿ ಶಾಸನ ರಚನೆ ಅವಧಿಯಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧೇಯಕವನ್ನು ಮಂಡಿಸಿದರು. ತೆರಿಗೆ ಸರಳೀಕರಣಗೊಳಿಸುವಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಮುಂದಿದ್ದು, ಅದು ಪ್ರಗತಿಪರ ಯುಪಿಎ ಸರಕಾರದ ಕೂಸು. ಹೀಗಾಗಿ, ವಿರೋಧಿಸುವ ಪ್ರಶ್ನೆಯೆ ಉದ್ಭವಿಸುವುದಿಲ್ಲ ಸ್ಪಷ್ಟಪಡಿಸಿದರು.
ಈ ಹಿಂದೆ 2011ರಲ್ಲೇ ಯುಪಿಎ ಸರಕಾರ ಜಿಎಸ್‌ಟಿ ವಿಧೇಯಕ ಮಂಡನೆಗೆ ಸಿದ್ಧತೆ ನಡೆಸಿತ್ತು. ಆ ವೇಳೆ ಗುಜರಾತ್, ಮಧ್ಯಪ್ರದೇಶ ಹಾಗೂ ತಮಿಳುನಾಡು ಸರಕಾರಗಳು ವಿರೋಧಿಸಿದ್ದವು. ಇದೀಗ ಜಿಎಸ್ಟಿ ಕಾನೂನು ಜಾರಿಗೆ ಅವರೇ ಮುಂದಾಗಿದ್ದಾರೆ ಎಂದು ಹೇಳಿದರು.
ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿಎಸ್ಟಿ ಕಾಯ್ದೆಗೆ ಪೂರಕವಾಗಿ ವಿಧೇಯಕವನ್ನು ಮಂಡಿಸಲಾಗಿದೆ. ಇಲ್ಲಿ ನಡೆಯುವ ಚರ್ಚೆಗಳಿಂದ ಬದಲಾವಣೆಗಳು ಅಸಾಧ್ಯ. ಆದರೂ ಇಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಜಿಎಸ್ಟಿ ಮಂಡಳಿ ಸಭೆಯಲ್ಲಿ ಕೇಂದ್ರದ ಗಮನಕ್ಕೆ ತರಲಾಗುವುದು ಎಂದು ಸ್ಪಷ್ಟನೆ ನೀಡಿದರು.







