ದೈಹಿಕ ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಧರಣಿ
ಬೆಂಗಳೂರು, ಜೂ.19: ವಯೋಮಿತಿ ಮೀರುತ್ತಿರುವ ದೈಹಿಕ ಶಿಕ್ಷಣ(ಸಿಪಿಎಡ್) ಪದವೀಧರ ಅಭ್ಯರ್ಥಿಗಳನ್ನು ಪ್ರಾಥಮಿಕ ಶಾಲೆಗಳಿಗೆ ಕೂಡಲೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಇಂದು ನಗರದ ರಾಜ್ಯ ನಿರುದ್ಯೋಗಿ ಸಿಪಿಎಡ್ ಪದವೀಧರ ಸಂಘದ ಸದಸ್ಯರು ಧರಣಿ ನಡೆಸಿದರು.
ಸೋಮವಾರ ನಗರದ ಸ್ವಾತಂತ್ರ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಸಂಘದ ಅಧ್ಯಕ್ಷ ಯಲ್ಲಪ್ಪ ಮಾತನಾಡಿ, 2006ರ ನಂತರ ರಾಜ್ಯದಲ್ಲಿನ ಪ್ರಾಥಮಿಕ ಶಾಲೆಗಳಿಗೆ ಒಮ್ಮೆಯೂ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಿಲ್ಲ. ಇದರಿಂದ ರಾಜ್ಯದಲ್ಲಿ 40 ಸಾವಿರ ದೈಹಿಕ ಶಿಕ್ಷಕ ಹುದ್ದೆಗಳು ಖಾಲಿಯಿವೆ. ಇತ್ತ ಹತ್ತು ವರ್ಷಗಳಿಂದ ನೇಮಕ ಪ್ರಕ್ರಿಯೆಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಿರುವ ದೈಹಿಕ ಪದವಿ ಅಭ್ಯರ್ಥಿಗಳ ವಯೋಮಿತಿ ಮೀರುವ ಹಂತಕ್ಕೆ ಬಂದಿದೆ ಎಂದು ಅಸಹಾಯಕತೆ ತೋಡಿಕೊಂಡರು.
ನೇಮಕಾತಿಗಾಗಿ ಆಗ್ರಹಿಸಿ ಕಳೆದ ಐದು ವರ್ಷಗಳಿಂದ 15ಕ್ಕೂ ಅಧಿಕ ಬಾರಿ ಧರಣಿ ನಡೆಸಲಾಗಿದೆ. ಆದರೆ ಸರಕಾರ ಕೇವಲ ಭರವಸೆಯಲ್ಲಿ ಕೈ ತೊಳೆದುಕೊಳ್ಳುತ್ತಿದೆ. ಈ ಕುರಿತು ರಾಷ್ಟ್ರಪತಿಗಳಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅತಂತ್ರಕ್ಕೆ ಸಿಲುಕಿರುವ ಸಾವಿರಾರು ಸಿಪಿಎಡ್ ಪದವೀಧರರು ವಯೋಮಿತಿ ಮೀರುವ ಮುನ್ನ ದೈಹಿಕ ಶಿಕ್ಷಕರ ನೇಮಕಾತಿಗೆ ರಾಜ್ಯ ಸರಕಾರ ಕೂಡಲೆ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.





