ಸಚಿವ ರೈ ಅವರಿಗೆ ಬಿಜೆಪಿ, ಪ್ರಭಾಕರ ಭಟ್ಟರ ಸರ್ಟಿಫಿಕೇಟ್‌ನ ಅಗತ್ಯವಿಲ್ಲ
ಬೆಳ್ತಂಗಡಿ,ಜೂ.19: ರಾಜ್ಯದ ಹಿರಿಯ ಸಚಿವರಾಗಿದ್ದು ಜನನಾಯಕರಾಗಿರುವ ಬಿ.ರಮಾನಾಥ ರೈ ಅವರಿಗೆ ಕಲ್ಲಡ್ಕ ಪ್ರಭಾಕರ ಭಟ್ಟರ ಅಥವಾ ಬಿಜೆಪಿಯವರ ಯಾವ ಸರ್ಟಿಫಿಕೇಟ್‌ನ ಅಗತ್ಯವೂ ಇಲ್ಲ. ಆರುಬಾರಿ ಅವರನ್ನು ಶಾಸಕರನ್ನಾಗಿ ಆರಿಸುವ ಮೂಲಕ ಜನರು ಈಗಾಗಲೆ ಅದನ್ನು ನೀಡಿದ್ದಾರೆ ಅವರ ಬಗ್ಗೆ ಜಿಲ್ಲೆಯ ಜನರಿಗೆ ತಿಳಿದಿದೆ ಎಂದು ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ಹೇಳಿದ್ದಾರೆ.
ಬೆಳ್ತಂಗಡಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಈ ಅಭಿಪ್ರಾಯ ವ್ಯಕ್ತ ಪಡಿಸಿದರು. ಆರು ಬಾರಿ ಶಾಸಕರಾಗಿ ಸಚಿವರಾಗಿ ರೈಗಳು ಬಂಟ್ವಾಳಕ್ಕೆ ಹಾಗೂ ಜಿಲ್ಲೆಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಅವರು ಎಂದಿಗೂ ಯಾವುದೇ ಮತೀಯವಾದಕ್ಕೆ ಬೆಂಬಲ ನೀಡಿದವರಲ್ಲ ಪ್ರಚೋದನಕಾರಿಯಾಗಿ ಮಾತನಾಡಿದವರಲ್ಲ ಅವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ ಎಂದರು.
ಚುನಾವಣೆ ಹತ್ತಿರವಾದಾಗ ಕೋಮುಗಲಭೆಗಳನ್ನು ಹುಟ್ಟು ಹಾಕುವುದು ಹಿಂದಿನಿಂದಲೂ ಬಿಜೆಪಿ ಅನುಸರಿಸಿಕೊಂಡು ಬಂದಿದ್ದಾರೆ, ಬಿಜೆಪಿಗೆ ಇದೀಗ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬ ಭಯ ಆರಂಭವಾಗಿದೆ. ಸಿದ್ದರಾಮಯ್ಯ ಅವರ ಜನಪ್ರಿಯ ಸರಕಾರದ ವಿರುದ್ದ ಮಾತನಾಡಲು ವಿಚಾರಗಳಿಲ್ಲವಾಗಿದೆ. ಸೋಲಿನ ಭಯದಿಂದಲೇ ಬಿಜೆಪಿ ಇದೀಗ ಗಲಭೆಗಳನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ. ಕಲ್ಲಡ್ಕದಲ್ಲಿ ನಡೆದಿರುವುದು ಇದೇ ಆಗಿದೆ ಆದರೆ ಇದಕ್ಕೆ ಜಿಲ್ಲೆಯ ಜನತೆ ಎಂದಿಗೂ ಬೆಂಬಲ ನೀಡುವುದಿಲ್ಲ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಸ್ಥಾನಗಳನ್ನೂ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ಬಿಜೆಪಿ ಅನುಸರಿಸುತ್ತಿರುವ ಇಂತಹ ಕುತಂತ್ರಗಳಿಗೆ ತಕ್ಕ ಉತ್ತರ ನೀಡಲು ಕಾಂಗ್ರೆಸ್ ಶಕ್ತವಾಗಿದೆ ಎಂದರು.
ಜಿಲ್ಲೆಯ ಉಸ್ತುವಾರಿ ಸಚಿವರಾಗಿ ರಮಾನಾಧ ರೈ ಅವರು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಗಲಭೆಯಾಗದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿಯೂ ಅವರದ್ದೇ ಆಗಿದೆ. ಈ ಹಿನ್ನಲೆಯಲ್ಲಿ ಯಾರೇ ವ್ಯಕ್ತಿಗಳು ಪ್ರಚೋದನಕಾರಿಯಾಗಿ ಮಾತನಾಡಿದರೆ ಅದು ಪ್ರಭಾಕರ ಭಟ್ಟರೇ ಆಗಿದ್ದರೂ ಅವರ ವಿರುದ್ದ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ ಎಂದು ಸಚಿವರು ಹೇಳಿರುವುದು ವೀಡಿಯೋದಲ್ಲಿದೆ, ಅದು ಅಸಲಿಯೋ ನಕಲಿಯೋ ಗೊತ್ತಿಲ್ಲ ಆದರೆ ಕೋಮುಗಲಭೆಗೆ ಪ್ರಚೋದನೆ ನೀಡುವವರ ವಿರುದ್ದ ಪ್ರಚೋದನಕಾರಿಯಾಗಿ ಭಾಷಣ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕಾದುದು ಅಗತ್ಯವಾಗಿದೆ ಎಂದರು.
ಚುನಾವಣೆ ಹತ್ತಿರವಾದಾಗ ಇಂತಹ ಘಟನೆಗಳು ಹೆಚ್ಚಾಗುತ್ತಿದೆ. ಉದ್ದೇಶಪೂರ್ವಕವಾಗಿ ಇದನ್ನು ಮಾಡಲಾಗುತ್ತಿದ್ದು ಮತೀಯ ಧ್ರುವೀಕರಣ ಮಾಡಿ ಮತಗಳಿಸುವ ತಂತ್ರ ಇದಾಗಿದೆ. ಇದಕ್ಕೆ ಕಾಂಗ್ರೆಸ್ ಸರಕಾರ ಅವಕಾಶ ನೀಡುವುದಿಲ್ಲ. ರಾಜ್ಯದಲ್ಲಿ ಸಿದ್ದರಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಯಾವುದೇ ರೀತಿಯ ಕೋಮುಗಲಭೆಗಳಿಗೂ ಅವಕಾಶ ನೀಡದೆ ಉತ್ತಮರೀತಿಯ ಆಡಳಿತ ನಡೆಸುತ್ತಿದೆ ಇದು ಬಿಜೆಪಿಯಲ್ಲಿ ನಡುಕ ಮೂಡಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಗೌಡ, ಬೆಳ್ತಂಗಡಿ ಪಟ್ಟನ ಪಂಚಾಯತು ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಕಾಂಗ್ರೆಸ್ ಎಸ್‌ಸಿ ಘಟಕದ ತಾಲೂಕು ಅಧ್ಯಕ್ಷ ಬಿಕೆ ವಸಂತ್ ಉಪಸ್ಥಿತರಿದ್ದರು.
ಮುಂದಿನ ಚುನಾವಣೆಯಲ್ಲಿ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ ವಸಂತ ಬಂಗೇರ ಅವರೇ ಅಭ್ಯರ್ಥಿಯಾಗಿದ್ದು ವರು ದಾಖಲೆಯ ಆರನೇ ಬಾರಿ ಗೆಲುವನ್ನು ಪಡೆಯಲಿದ್ದಾರೆ. ಅಭ್ಯರ್ಥಿಯ ಬಗ್ಗೆ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಅವರೇ ನಮ್ಮ ನಾಯಕರಾಗಿದ್ದಾರೆ
ಕೆ ಹರೀಶ್ ಕುಮಾರ್







