ಶೇ.90 ಅಂಕ ಗಳಿಸಿದ 107 ವಿದ್ಯಾರ್ಥಿಗಳಿಗೆ ಅಭಿನಂಧನೆ

ಉಳ್ಳಾಲ,ಜೂ.19: ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣದ ಜೊತೆಗೆ ದೇಶದ ಐಕ್ಯತೆಯನ್ನು ಕಾಪಾಡುವ ಕುರಿತ ಜಾಗೃತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದು ಹೆತ್ತವರ ಹಾಗೂ ಶಿಕ್ಷಣ ಸಂಸ್ಥೆಯ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಸಮಾಜಕ್ಕೆ ಪೂರಕವಾದ ಶಿಕ್ಷಣ ಸಿಗುವ ಮೂಲಕ ಮೌಲ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದು ದೇರಳಕಟ್ಟೆ ಕಣಚೂರು ಆಸ್ಪತ್ರೆ ಹಾಗೂ ವೈದ್ಯಕೀಯ ಸಂಸ್ಥೆಯ ಸ್ಥಾಪಕಾಧ್ಯಕ್ಷ ಯು.ಕೆ.ಮೋನು ಅಭಿಪ್ರಾಯಪಟ್ಟರು.
ಅವರು ಕುಂಪಲ ಶ್ರೀ ಬಾಲಕೃಷ್ಣ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಜರಗಿದ ಜ್ಞಾನ ದೀವಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರಧಾನವನ್ನು ನೆರವೇರಿಸಿ ಮಾತನಾಡಿದರು
ವಿದ್ಯಾಭ್ಯಾಸವನ್ನು ಪಡೆದು ಹೆತ್ರವರ ಆಸೆಯಂತೆ ಉನ್ನತ ಹುದ್ದೆಯನ್ನು ಅಲಂಕರಿಸುವುದು ಎಷ್ಟು ಮುಖ್ಯವೋ ಅದರ ಜೊತೆಯಲ್ಲಿ ದೇಶಕ್ಕೆ ಏನಾದರೂ ಕೊಡುಗೆಯನ್ನು ನೀಡುವ ಮನೋಭಾವನೆ ಎಲ್ಲರಲ್ಲಿಯೂ ಮೂಡಬೇಕು. ಪ್ರಸುತ್ತ ಶಿಕ್ಷಣ ಎಂಬುವುದು ಬಂಡವಾಳಶಾಹಿಗಳ, ರಾಜಕೀಯದವರ ಹಿಡಿತದಲ್ಲಿದ್ದು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಂತಹ ಮಕ್ಕಳಿಗೆ ದಾರಿ ತೋರಿಸುವಂತಹ ಕೆಲಸ ಕುಂಪಲದ ಶ್ರೀ ಬಾಲಕೃಷ್ಣ ಮಂದಿರದಿಂದ ಆಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಾಮಾಜಿಕ ಕಳಕಳಿಯನ್ನು ಬೆಳೆಸಬೇಕಿದೆ. ಇಂತಹ ಶಿಕ್ಷಣವನ್ನು ನೀಡುವ ಜವಾಬ್ದಾರಿ ಪ್ರತಿಯೊಂದು ಹೆತ್ತವರ ಮೇಲಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಯದ ಕುಲಸಚಿವ ಪ್ರಭಾಕರ ನೀರುಮಾರ್ಗ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕ್ರತಿಕ ಚಟುವಟಿಕೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕಿದೆ. ಇಂತಹ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ಹೆತ್ತವರು ಹಾಗೂ ಶಿಕ್ಷಕರ ಮೇಲಿದೆ. ಪ್ರಸುತ್ತ ದೇಶದಲ್ಲಿ ಮಾನವೀಯ ಮೌಲ್ಯಗಳ ಜೊತೆಗೆ ಸಾಮಾಜಿಕ ಮೌಲ್ಯಗಳು ಕಡಿಮೆಯಾತ್ತಿದ್ದು ಈ ಮೂಲಕ ಪ್ರಕ್ಷಬ್ಧ ವಾತಾವರಣ ಎಲ್ಲೆಡೆ ನಿರ್ಮಾಣವಾಗುತ್ತಿದೆ. ಇದನ್ನು ಹೋಗಲಾಡಿಸಲು ಮೌಲ್ಯಯುತ ಹಾಗೂ ಸಂಸ್ಕಾರಯುತ ಶಿಕ್ಷಣದ ಅನಿವಾರ್ಯತೆ ಇದೆ. ಇಂತಹ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆದಲ್ಲಿ ಭವಿಷ್ಯದಲ್ಲಿ ಉತ್ತಮ ನಾಗರೀಕರಾಗಿ ಬೆಳೆಯಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಡ್ಯಾರು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಲತಾ ಉಳ್ಳಾಲ್ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬ್ರಿಜೇಶ್ ಚೌಟ, ರಥಬೀದಿ ಸರಕಾರಿ ಪ್ರಥಮ ಕಾಲೇಜಿನ ಪ್ರಾಧ್ಯಾಪಕ ಡಾ.ನವೀನ್.ಎನ್.ಕೊಣಾಜೆ, ಉದ್ಯಮಿ ಹರೀಶ್ ಕಾಮತ್, ಚಲನಚಿತ್ರ ನಾಯಕನಟ ಅರ್ಜುನ್ ಕಾಪಿಕಾಡ್ ಮುಖ್ಯ ಅತಿಥಿಗಳಾಗಿದ್ದರು. ಶ್ರೀ ಬಾಲಕೃಷ್ಣ ಮಂದಿರದ ಗೌರವಾಧ್ಯಕ್ಷ ಕೇಶವದಾಸ್ ಬಗಂಬಿಲ, ಮಾಧವ ಬಗಂಬಿಲ, ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಶ್ಯಾಮಲಾ ರಾವ್ ಉಪಸ್ಥಿತರಿದ್ದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಹಾಗೂ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಪ್ರವೀಣ್ ಎಸ್ ಕುಂಪಲ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಶೇಖರ್ ಬಿ.ಜೆ ಪ್ರಶಸ್ತಿ ಪುರಸ್ಕೃತರ ವಿವರ ನೀಡಿದರು. ವೆಂಕಟೇಶ್ ಕುಂಪಲ ವಂದಿಸಿದರು.
ಈ ಸಂದರ್ಭ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಲಾ ಹಾಗೂ ಕಾಲೇಜುಗಳ ಶೇ. 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ಪಿಯುಸಿಯ 16 ಹಾಗೂ ಎಸ್‌ಎಸ್‌ಎಲ್‌ಸಿ ಯ 91 ವಿದ್ಯಾರ್ಥಿಗಳನ್ನು ಅಭಿನಂಧಿಸಲಾಯಿತು.







