ಸಿರಿಯ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಅಮೆರಿಕ ವಿಮಾನ

ವಾಶಿಂಗ್ಟನ್, ಜೂ. 19: ಸಿರಿಯ ಸರಕಾರಕ್ಕೆ ಸೇರಿದ ಎಸ್‌ಯು-22 ವಿಮಾನವೊಂದನ್ನು ಅಮೆರಿಕದ ಎಫ್-18 ಸೂಪರ್ ಹಾರ್ನೆಟ್ ವಿಮಾನವೊಂದು ರವಿವಾರ ಹೊಡೆದುರುಳಿಸಿದೆ ಎಂದು ಇರಾಕ್‌ನಲ್ಲಿರುವ ಅಮೆರಿಕ ನೇತೃತ್ವದ ಮಿತ್ರಪಡೆಯ ಪ್ರಧಾನ ಕಚೇರಿಯು ಲಿಖಿತ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಉತ್ತರ ಸಿರಿಯದಲ್ಲಿ ಇಸ್ಲಾಮಿಕ್ ಸ್ಟೇಟ್ ಗುಂಪಿನ ವಿರುದ್ಧ ಹೋರಾಟ ನಡೆಸುತ್ತಿರುವ ಅಮೆರಿಕ ಬೆಂಬಲಿತ ಪಡೆಗಳ ಮೇಲೆ ಸಿರಿಯ ವಿಮಾನವು ಬಾಂಬ್‌ಗಳನ್ನು ಉದುರಿಸಿದ ಬಳಿಕ ಅಮೆರಿಕ ಯುದ್ಧವಿಮಾನವು ಈ ಕ್ರಮ ತೆಗೆದುಕೊಂಡಿತು ಎಂದು ಹೇಳಿಕೆ ತಿಳಿಸಿದೆ.
ಸಿರಿಯ ಸರಕಾರದ ಸೇನೆ ಹಾಗೂ ಅಮೆರಿಕ ಬೆಂಬಲಿತ ಕುರ್ದಿಶ್ ಮತ್ತು ಅರಬ್ ಹೋರಾಟಗಾರರ ನಡುವೆ ಭೂಯುದ್ಧ ನಡೆಯುತ್ತಿದೆ ಎಂಬುದಾಗಿ ಮಾನವಹಕ್ಕು ಗುಂಪೊಂದು ವರದಿ ಮಾಡಿದ ಬೆನ್ನಿಗೇ ಈ ಘಟನೆ ನಡೆದಿದೆ.
‘‘ರವಿವಾರ ಸಂಜೆ 6:43ಕ್ಕೆ ಸಿರಿಯ ಪಡೆಗಳು ಎಸ್‌ಯು-22 ವಿಮಾನದ ಮೂಲಕ ತಬ್ಕಾದ ದಕ್ಷಿಣದಲ್ಲಿ ಎಸ್‌ಡಿಎಫ್ (ಸಿರಿಯನ್ ಪ್ರಜಾಸತ್ತಾತ್ಮಕ ಪಡೆಗಳು) ಸಮೀಪ ಬಾಂಬ್‌ಗಳನ್ನು ಹಾಕಿದವು. ಬಳಿಕ ಯುದ್ಧದ ನಿಯಮಗಳಂತೆ ಹಾಗೂ ಮಿತ್ರಪಡೆಗಳ ಸಾಮೂಹಿಕ ಸ್ವರಕ್ಷಣೆಯ ಅಂಗವಾಗಿ ಸಿರಿಯದ ವಿಮಾನವನ್ನು ಅಮೆರಿಕದ ಎಫ್/ಎ-18ಇ ಸೂಪರ್ ಹಾರ್ನೆಟ್ ವಿಮಾನ ಹೊಡೆದು ಹಾಕಿತು’’ ಎಂದು ಜಂಟಿ ಕಾರ್ಯಪಡೆ ಹೇಳಿಕೆಯೊಂದರಲ್ಲಿ ತಿಳಿಸಿದೆ.







