ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಉಡುಪಿ, ಜೂ.19: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬೆಂಗಳೂರು ಆಯುಷ್ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಜಿರೆ ಎಸ್‌ಡಿಎಂ ಎಜು ಕೇಶನಲ್ ಸೊಸೈಟಿಯ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾ ಚರಣೆಯನ್ನು ಜೂ.21ರಂದು ಬೆಳಗ್ಗೆ 7ಗಂಟೆಗೆ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
12 ಕಡೆಗಳಲ್ಲಿ ತರಬೇತಿ: ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಸರಕಾರದ ನಿರ್ದೇಶನದಂತೆ ಉಜಿರೆ ಎಸ್‌ಡಿಎಂ ಎಜುಕೇಶನಲ್ ಸೊಸೈಟಿಯು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಒಂದು ತಿಂಗಳ ಅವಧಿಯ ಉಚಿತ ಯೋಗ ಶಿಬಿರವನ್ನು ಜಿಲ್ಲೆಯ 12 ಸ್ಥಳಗಳಲ್ಲಿ ನಡೆಸಲಾಗುತ್ತಿದೆ.
ಉಡುಪಿಯಲ್ಲಿ ಉದ್ಯಾವರ ಎಸ್‌ಡಿಎಂ ಆಯುರ್ವೇದ ಕಾಲೇಜು, ಕಲ್ಯಾಣಪುರದ ತ್ರಿಶಾ ಕಾಲೇಜು, ಪದ್ಮಾವತಿ ಕಲ್ಯಾಣ ಮಂಟಪ-ಮಾರುತಿ ಲೇನ್, ಶ್ರೀಕೃಷ್ಣ ಮಠದ ರಾಜಾಂಗಣ, ಪರ್ಕಳ ಕೆರೆಬದಿ ನಾಗಸ್ಥಾನ, ಕಾರ್ಕಳ ಭುವನೇಂದ್ರ ಕಾಲೇಜು, ಪೆರ್ವಾಜೆ ಸುಂದರ ಪುರಾಣಿಕ ಪ್ರೌಢಶಾಲೆ, ಹೆಬ್ರಿ ಸಮಾಜ ಮಂದಿರ, ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜು, ಕಾರಂತ ಭವನ ಸಾಲಿಗ್ರಾಮ, ಕೋಟ ಕಾರಂತ ಥೀಮ್ ಪಾರ್ಕ್ ಈ ಸ್ಥಳಗಳಲ್ಲಿ ಸಾರ್ವಜನಿಕ ರಿಗೆ ತರಬೇತಿಯನ್ನು ನಡೆಸಲಾಗುತ್ತಿದೆ.
ಯೋಗ ದಿನಾಚರಣೆಯ ಅಂಗವಾಗಿ ಜಿಲ್ಲಾ ಒಳಂಗಣ ಕ್ರೀಡಾಂಗಣದಲ್ಲಿ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಇವರೆಲ್ಲ ಪಾಲ್ಗೊಳ್ಳು ತ್ತಿದ್ದಾರೆ. ಮೊದಲಿನ 45 ನಿಮಿಷಗಳ ಅವಧಿಗೆ ಆಯುಷ್ ಮಂತ್ರಾಲಯದಿಂದ ನೀಡಲ್ಪಟ್ಟ ಯೋಗಾಸನಗಳ ಪ್ರಾತ್ಯಕ್ಷಿಕೆ ಪ್ರದರ್ಶನ, ಯೋಗ ನಡಿಗೆ ಮುಂತಾದ ಯೋಗದ ಬಗ್ಗೆ ಜಾಗೃತಿಯನ್ನು ಉಂಟು ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಅಲಕಾನಂದ ರಾವ್ ತಿಳಿಸಿದ್ದಾರೆ.







