ಜೂನ್ 23: ಜಿ.ಎಸ್.ಟಿ ಮಾಹಿತಿ ಕಾರ್ಯಕ್ರಮ

ಪುತ್ತೂರು,ಜೂ19; ರಾಜ್ಯದಲ್ಲಿ ಜು.1ರಿಂದ ಜಿ.ಎಸ್.ಟಿ ಕಾಯ್ದೆ ಜಾರಿಗೊಳ್ಳಲಿದ್ದು, ಈ ಬಗ್ಗೆ ವರ್ತಕರಿಗೆ ಹಾಗೂ ಜನಸಾಮಾನ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜೂನ್ 23ರಂದು ಸಾಲ್ಮರ ಕೊಟೇಚಾ ಸಭಾಂಗಣದಲ್ಲಿ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರು ಸುಳ್ಯ ತೆರಿಗೆ ಸಲಹೆಗಾರರ ಸಮಿತಿ ಅಧ್ಯಕ್ಷ ವಿ.ಕೃಷ್ಣ ಭಟ್ ತಿಳಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಜಿ.ಎಸ್.ಟಿ ಬಗ್ಗೆ ಹಲವಾರು ಗೊಂದಲಗಳು ಜನತೆ ಹಾಗೂ ವರ್ತಕರಲ್ಲಿ ಮನೆ ಮಾಡಿದೆ. ಜಿಎಸ್.ಟಿಯಲ್ಲಿ ವಿಲಾಸ ತೆರಿಗೆ,ಸೇವಾ ತೆರಿಗೆ, ಮೌಲ್ಯವರ್ಧಿತ ತೆರಿಗೆ, ಕೇಂದ್ರ ಅಬಕಾರಿ ತೆರಿಗೆ ಹಾಗೂ ಪ್ರವೇಶ ತೆರಿಗೆಗಳು ಒಂದುಗೂಡಿ ಬರುವುದರಿಂದ ವರ್ತಕರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಈ ಬಗ್ಗೆ ಸರಿಯಾದ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಅಳವಡಿಸಿಕೊಳ್ಳಲಾಗಿದೆ.
ಕೊಟೇಚಾ ಸಭಾಂಗಣದಲ್ಲಿ ಜೂನ್ 23ರ ಅಪರಾಹ್ನ 2 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಶಂಭು ಭಟ್ ಭಾಗವಹಿಸಲಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ಪವಿತ್ರ ಉಪಸ್ಥಿತರಿರುತ್ತಾರೆ.
ಸಾರ್ವಜನಿಕರು ಕಾರ್ಯಾಗಾರದಲ್ಲಿ ಭಾಗವಹಿಸಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ವರ್ತಕರು, ಸಾರ್ವಜನಿಕರು,ಲೆಕ್ಕಪರಿಶೋಧಕರು ಹಾಗೂ ತೆರಿಗೆ ಸಲಹೆಗಾರರು ಇದರಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತೆರಿಗೆ ಸಲಹೆಗಾರರ ಸಮಿತಿ ಉಪಾಧ್ಯಕ್ಷ ಕೃಷ್ಣ ಎಂ. ಉಪಸ್ಥಿತರಿದ್ದರು.







