ಪಾಕಿಸ್ತಾನ ಪರ ಘೋಷಣೆ ಆರೋಪ: ಮೂವರ ಬಂಧನ

ಸುಂಟಿಕೊಪ್ಪ, ಜೂ.19: ಲಂಡನ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪೈನಲ್‌ನಲ್ಲಿ ಭಾರತವನ್ನು ಸೋಲಿಸಿದ ಪಾಕಿಸ್ತಾನದ ಪರ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು ಎನ್ನಲಾದ ಮೂರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದು, ಸ್ಥಳೀಯರು ನೀಡಿದ ದೂರಿನ ಮೇರೆ ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪಂದ್ಯ ಮುಗಿದ ತಕ್ಷಣ 7ನೇ ಹೊಸಕೋಟೆ ಕಲ್ಲುಕೋರೆ, ಕಲ್ಲೂರು, ಅಂದಗೋವೆ ಗ್ರಾಮಗಳಿಗೆ ತೆರಳುವ ವೃತ್ತದ ಬಳಿಯಲ್ಲಿ ಕಾರು ಹಾಗೂ ದ್ವಿಚಕ್ರ ವಾಹನದಲ್ಲಿ ಬಂದ ಸ್ಥಳೀಯರಾದ 7ನೆ ಹೊಸಕೋಟೆ ಗ್ರಾಪಂ ಉಪಾಧ್ಯಕ್ಷ ಮುಸ್ತಾಫ (ಕುಂಞಕುಟ್ಟಿ) ಅವರ ಪುತ್ರ ರಿಯಾಝ್, ಅಬ್ದುಲ್ ಸಮದ್, ಕೆ.ಎ.ಮುಹಮ್ಮದ್ ಅವರ ಪುತ್ರ ಜಬ್ಬೀರ್ ಹಾಗೂ ಮುನೀರ್ ಅವರು ಪಟಾಕಿ ಸಿಡಿಸಿ ಪಾಕಿಸ್ತಾನ ಪರ ಘೋಷಣೆ ಹಾಕಿ ಸಂಭ್ರಮಾಚರಣೆ ಮಾಡಿದರೆಂದು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಬಿಜೆಪಿ ಮುಖಂಡರು ದೂರು ಸಲ್ಲಿಸಿದ್ದರು ಎನ್ನಲಾಗಿದೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಐಪಿಸಿ 295 (ಎ) 34ನೇ ಸೆಕ್ಷನ್ ಅಡಿ ಕೋಮು ಪ್ರಚೋದನೆಗೆ ಅವಕಾಶ ನೀಡಿದ್ದದಲ್ಲದೆ ಘರ್ಷಣೆಗೆ ಅವಕಾಶ ಕಾರಣಕ್ಕೆ ಹಾಗೂ ಸಮಾನ ಉದ್ದೇಶಕ್ಕಾಗಿ ಕೆಲವರು ಬೆಂಬಲ ನೀಡಿದ್ದಾರೆಂದು ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಿದ್ದಾರೆ ಇನ್ನೋರ್ವ ಆರೋಪಿ ಮುನೀರ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.





