ಕಲೆ ಜಾತಿ, ಧರ್ಮವನ್ನು ಮೀರಿದ್ದಾಗಿದೆ: ಅಝೀಝುಲ್ಲಾ ಬೇಗ್
ಬೆಂಗಳೂರು, ಜೂ.19: ಕಲೆ ಎಂಬುದು ಧರ್ಮ, ಜಾತಿ, ಭಾಷೆಯನ್ನು ಮೀರಿದ ಕ್ಷೇತ್ರವಾಗಿದ್ದು, ಇದರಿಂದ ಸಮಾಜದ ಬೆಳವಣಿಗೆಗೆ ಪೂರಕವಾದ ಕೆಲಸವಾಗಬೇಕೆಂದು ಕರ್ನಾಟಕ ಉರ್ದು ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಅಝೀಝುಲ್ಲಾ ಬೇಗ್ ತಿಳಿಸಿದ್ದಾರೆ.
ಸೋಮವಾರ ಕರ್ನಾಟಕ ಲಲಿತ ಕಲಾ ಅಕಾಡೆಮಿ ಕನ್ನಡ ಭವನದಲ್ಲಿ ವರ್ಣ ಆರ್ಟ್ ಗ್ಯಾಲರಿ ಆಯೋಜಿಸಿದ್ದ ರಮಝಾನ್ ಕಲಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಕಲಾ ಶಿಬಿರಗಳು ಹೆಚ್ಚಾಗಿ ನಡೆಯುಬೇಕು. ಇದರಿಂದ ಮಾನವ ಸಂಬಂಧಗಳನ್ನು ಬೆಸೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ಅಧ್ಯಕ್ಷ ಎಂ.ಎಸ್.ಮೂರ್ತಿ ಮಾತನಾಡಿ, ಕಲೆಯೇ ಒಂದು ಧರ್ಮವಾಗಿದ್ದು, ಇಲ್ಲಿ ಜಾತಿ, ಧರ್ಮ ಹಾಗೂ ಭಾಷೆಗಳ ಮಡಿವಂತಿಕೆಯಿಲ್ಲ. ಕಲೆಯ ಆರಾಧನೆಗೆ ಯಾವುದೇ ಕಟ್ಟುಪಾಡುಗಳಿಲ್ಲ. ಸೃಜನಶೀಲತೆಯನ್ನು ಅಭಿವ್ಯಕ್ತಿಸುವವರನ್ನು ಕಲೆ ಮುಕ್ತವಾಗಿ ಸ್ವಾಗತಿಸುತ್ತದೆ ಎಂದು ತಿಳಿಸಿದರು.
ಕಲೆಯ ಅಭಿವೃದ್ಧಿಗೆ ಸರಕಾರ ಸಾಕಷ್ಟು ಧನ ಸಹಾಯ ಮಾಡುತ್ತಿದೆ. ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಲೆಯ ವಿಸ್ತರಣೆಯಲ್ಲಿ ತೊಡಗಿದ್ದೇನೆ. ಪ್ರಸ್ತುತ ದಿನದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಜನರ ನಡುವೆ ಅಸಹಿಷ್ಣುತೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಲಾವಿದರಾಗಿ ನಾವು ಜನರ ಮನಸನ್ನು ಒಂದು ಗೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಮಝಾನ್ ಕಲಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ ಉಪಸ್ಥಿತರಿದ್ದರು. ಈ ರಮಝಾನ್ ಕಲಾ ಶಿಬಿರದಲ್ಲಿ 12ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು.







