ರಮಾನಾಥ ರೈ ರಾಜೀನಾಮೆ, ಸಿಎಂ ಕ್ಷಮೆಯಾಚನೆಗೆ ಆಗ್ರಹ
ಉಡುಪಿ, ಜೂ.19: ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಕೇಸು ದಾಖ ಲಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಆದೇಶ ನೀಡಿರುವ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಆಗ್ರಹಿಸಿದ್ದಾರೆ.
ಕಡಿಯಾಳಿಯಲ್ಲಿರುವ ಪಕ್ಷದ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿ ಉಡುಪಿಗೆ ಭೇಟಿ ನೀಡುವ ಸಂದರ್ಭ ಗೈರು ಹಾಜರಾಗುವ ಮೂಲಕ ಶಿಷ್ಠಾಚಾರ ಉಲ್ಲಂಘಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕರ್ತವ್ಯ ಲೋಪ ಎಸಗಿದ್ದಾರೆ. ಕೃಷ್ಣ ಮಠ ಭೇಟಿಯನ್ನು ತಪ್ಪಿಸಿ ಕೊಳ್ಳಲು ಈ ರೀತಿ ಮಾಡಿರುವ ಮುಖ್ಯಮಂತ್ರಿಗಳು ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಆದುದರಿಂದ ಅವರು ಸಮಸ್ತ ಹಿಂದೂ ಸಮಾಜದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಎಲ್ಲೂರಿನಲ್ಲಿ ಸ್ಥಳೀಯ ನಾಗರಿಕರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಗೂಂಡಾಗಳಿಂದ ಹಲ್ಲೆ ಮಾಡಿಸಿರುವ ಶಾಸಕ ವಿನಯ ಕುಮಾರ್ ಸೊರಕೆ ಅವರ ಕ್ರಮ ಖಂಡನೀಯ ಎಂದು ಅವರು ಆರೋಪಿಸಿದರು. ಜಿಲ್ಲಾ ಬಿಜೆಪಿ ವತಿಯಿಂದ ಜೂ.21ರಂದು ಬೆಳಗ್ಗೆ 7.30ರಿಂದ 9ಗಂಟೆಯವರೆಗೆ ಹೊಟೇಲ್ ಕಿದಿಯೂರಿನ ಶೇಷಶಯನ ಹಾಲ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗಾಸನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸುರೇಶ್ ನಾಯಕ್ ಕುಯಿಲಾಡಿ, ಕಟಪಾಡಿ ಶಂಕರ ಪೂಜಾರಿ, ರವಿ ಅಮೀನ್ ಉಪಸ್ಥಿತರಿದ್ದರು.
ಜೂ.23ರಂದು ಯಡಿಯೂರಪ್ಪ ಉಡುಪಿಗೆ
ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜೂ.23ರಂದು ಉಡುಪಿ ಜಿಲ್ಲೆಗೆ ಆಗಮಿಸಲಿರು ವರು ಎಂದು ಮಟ್ಟಾರು ತಿಳಿಸಿದ್ದಾರೆ.
ಬೆಳಗ್ಗೆ ಕಾರ್ಕಳಕ್ಕ ಆಗಮಿಸುವ ಅವರು ದಲಿತ ಕಾಲೋನಿಗೆ ಭೇಟಿ ನೀಡಿ ಅವರು ಕುಂದುಕೊರತೆಯನ್ನು ಆಲಿಸಲಿರುವರು. ಬೆಳಗ್ಗೆ 11.30ಕ್ಕೆ ಕಾರ್ಕಳ ಮಂಜುನಾಥ ಪೈ ಸಭಾಂಗಣದಲ್ಲಿ ಜರಗುವ ಜಿಲ್ಲಾಮಟ್ಟದ ಕಾರ್ಯ ಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿರುವರು. ಮಧ್ಯಾಹ್ನ 4.30ಕ್ಕೆ ಪಕ್ಷದ ಉಡುಪಿ ಕಡಿಯಾಳಿ ಯಲ್ಲಿರುವ ಜಿಲ್ಲಾ ಕಚೇರಿಯಲ್ಲಿ ಸಮಾಲೋಚನೆ ಸಭೆ ನಡೆಸಿ, ಬಳಿಕ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆಯುವ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿರುವರು ಎಂದು ಅವರು ತಿಳಿಸಿದರು.







