ಕಾರ್ಯಕರ್ತರು ಗೊಂದಲಗಳಿಗೆ ಒಳಗಾಗದೆ ಪಕ್ಷ ಸಂಘಟನೆಗೆ ಶ್ರಮಿಸಬೇಕು: ಯಡಿಯೂರಪ್ಪ

ಕಡೂರು, ಜೂ.19: ಕಾರ್ಯಕರ್ತರು ಗೊಂದಲಗಳಿಗೆ ಒಳಗಾಗದೆ ಪಕ್ಷ ಸಂಘಟನೆಗೆ ಶ್ರಮಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅವರು ಸೋಮವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಬಿಜೆಪಿ ಜಿಲ್ಲಾ ಪ್ರಮುಖ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ಸಂಬಂಧ ಈಗಾಗಲೇ ಸರ್ವೆ ಕಾರ್ಯ ನಡೆಯುತ್ತಿದೆ, ಯಾರಿಗೆ ಟಿಕೆಟ್ ನೀಡಿದರೂ ಕಾರ್ಯಕರ್ತರು ಪಕ್ಷದ ಗೆಲುವಿಗೆ ದುಡಿಯಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಸರ್ಕಾರದ ಆಡಳಿತ ಅವಧಿಯಲ್ಲಿ ರಾಜ್ಯ ಸಂಪೂರ್ಣ ಬರದಿಂದ ತತ್ತರಿಸುತ್ತಿದೆ, ಗ್ರಾಮೀಣಾಭಿವೃದ್ದಿ ಸಚಿವರ ಊರಿನಲ್ಲೇ ಕುಡಿಯುವ ನೀರಿನ ತತ್ವಾರ ಉಂಟಾಗಿದೆ, ಬರವನ್ನು ಎದುರಿಸಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ ಅವರು, ರೈತರ ಸಾಲಮನ್ನಾ ಮಾಡುವಲ್ಲಿ ರಾಜ್ಯ ಸರ್ಕಾರ ಕೈಚೆಲ್ಲಿ ಕುಳಿತಿದೆ, ಈ ವಿಚಾರವಾಗಿ ಪಕ್ಷದ ವತಿಯಿಂದ ಆ.10ರಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ, ಚೀನಾ ದೇಶವನ್ನು ಭಾರತ ಹಿಂದಕ್ಕೆ ಹಾಕಿದೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಡವರು ಮತ್ತು ದೀನದಲಿತರ ಪರವಾಗಿ ಕೆಲಸ ಮಾಡುತ್ತಿದೆ, ಕಾರ್ಯಕರ್ತರು ಕೇಂದ್ರ ಸರ್ಕಾರ ಜನಪರ ಯೋಜನೆಗಳನ್ನು ಪ್ರಚಾರಕ್ಕೆ ತರಬೇಕು ಎಂದು ನುಡಿದರು.
ಸಂಸದೆ ಶೋಭಾಕರಂದ್ಲಾಜೆ ಮಾತನಾಡಿ ಬರುವ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಯೋಜನೆಗಳು ಹಾಗೂ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಆಡಳಿತಾವಧಿಯಲ್ಲಿ ನಡೆದ ಅಭಿವೃದ್ದಿ ಕಾರ್ಯಕ್ರಮಗಳು ಮುಂದಿನ ಚುನಾವಣೆಯ ಪ್ರಮುಖ ಪ್ರಣಾಳಿಕೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಡಿ.ಎನ್. ಜೀವರಾಜ್ ಮಾತನಾಡಿ ಬರ ಅಧ್ಯಯನ ಪ್ರವಾಸ ಸಂದರ್ಭದಲ್ಲಿ ರಾಜ್ಯದಲ್ಲಿ ಜನತೆ ಯಡಿಯೂರಪ್ಪ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿಸುತ್ತಿದ್ದಾರೆ, ಬಿಜೆಪಿ ಪಕ್ಷಕ್ಕೆ ಪೂರಕವಾದ ವಾತಾವರಣವಿದೆ, ಆದರೆ ಕಾರ್ಯಕರ್ತರು ಮೈಮರೆಯಬಾರದು ಯಡಿಯೂರಪ್ಪ ಅವರ ಅವಧಿಯಲ್ಲಿ ನಡೆದ ಅನೇಕ ಅಭಿವೃದ್ದಿ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುವಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಇಂದು ನಡೆದ ಪ್ರಮುಖ ಕಾರ್ಯಕರ್ತರ ಸಭೆಯು ಎಪಿಎಂಸಿ ಆವರಣದ ಗೋದಾಮಿನಲ್ಲಿ ಪಂಚತಾರ ಹೋಟೆಲ್‌ಗಳಿಗೂ ಮೀರಿಸುವಂತಹ ರೀತಿಯಲ್ಲಿ ಏರ್ಪಡಿಸಲಾಗಿದ್ದು, ಪ್ರಮುಖ ನಾಯಕರ ಪ್ರಶಂಸೆಗೆ ಒಳಗಾಯಿತು.
ವೇದಿಕೆಯಲ್ಲಿ ಜಿಪಂ ಅಧ್ಯಕ್ಷೆ ಚೈತ್ರಾಶ್ರೀ, ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೆಗೌಡ, ಎಂಎಲ್‌ಸಿ ಎಂ.ಕೆ. ್ರಾಣೇಶ್, ಮಾಜಿ ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಡಿ.ಎಸ್.ಸುರೇಶ್, ಜಿಪಂ ಉಪಾಧ್ಯಕ್ಷ ರಾಮಸ್ವಾಮಿ, ರಾಜ್ಯ ಪರಿಷತ್ ಸದಸ್ಯ ಕಲ್ಮುರಡಪ್ಪ ಉಪಸ್ಥಿತರಿದ್ದರು. ಬಿಜೆಪಿ ಕಡೂರು ತಾಲ್ಲೂಕು ಮಂಡಲಾಧ್ಯಕ್ಷ ಬೆಳ್ಳಿಪ್ರಕಾಶ್ ಸ್ವಾಗತಿಸಿದರು.







