ಐವರ ಬಂಧನ
ಬೆಂಗಳೂರು, ಜೂ.19: ಜೈನ ದೇವಾಲಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದ ಪ್ರಕರಣ ಸಂಬಂಧ ಅಂತರಾಜ್ಯದ ಐವರು ಆರೋಪಿಗಳನ್ನು ವಿವೇಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ಭರತ್ ಶರ್ಮ, ಹರಜೀ ರಾಮ್, ಶ್ರವಣ್ ಸಿಂಗ್, ಈಶ್ವರ್ ಲಾಲ್ ಮತ್ತು ಹರೀಶ್ ಬಂಧಿತ ಆರೋಪಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂಲತ ರಾಜಸ್ತಾನದವನಾದ ಆರೋಪಿ ಹರೀಶ್, ಭಾರತೀನಗರ ಜೈನ ದೇವಾಲಯದ ಕಟ್ಟಡದ ಕಾಮಗಾರಿ ಕೆಲಸ ಮಾಡಿಸುತ್ತಿದ್ದ. ದೇವಸ್ತಾನದಲ್ಲಿ ಪೂಜೆ ಸಮಯದಲ್ಲಿ ದೇವರ ವಿಗ್ರಹದ ಮೇಲೆ ಸಾಕಷ್ಟು ಚಿನ್ನಾಭರಣಗಳನ್ನು ಹಾಕುತ್ತಿರುವುದನ್ನು ಕೂಡ ಗಮನಿಸಿದ್ದ. ಹಾಗಾಗಿ, ದೇವಸ್ತಾನ ಬೀಗದ ಕೈ ಕದ್ದು ನಕಲಿ ಮಾಡಿಸಿದ್ದ ಹರೀಶ್ ಎ.16 ರಂದು ತನ್ನ ಸಹಚರರೊಂದಿಗೆ ಸೇರಿ ದೇವಾಲಯದ ಗರ್ಭಗುಡಿಯಲ್ಲಿ ವಿಗ್ರಹದ ಮೇಲೆ ಹಾಕಿದ್ದ 30 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದ ಎನ್ನುವ ಮಾಹಿತಿ ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ.
ಆರೋಪಿಗಳು ಹಿಂದಿನಿಂದಲೂ ಇದೇ ವತ್ತಿಯನ್ನು ಮಾಡಿಕೊಂಡು ಬಂದಿದ್ದರು. ಈ ಹಿಂದೆ ರಾಜಸ್ತಾನದಲ್ಲಿ ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿದ್ದು, ಅಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಹರೀಶ್ ಅಲ್ಲಿಂದ ತಲೆ ಮರೆಸಿಕೊಂಡು ನಗರದಲ್ಲಿ ಬಂದು ಕೆಲಸ ನಿರ್ವಹಿಸುತ್ತಿದ್ದು, ಹಣದ ಆಸೆ ಹೆಚ್ಚಾದ ಪರಿಣಾಮ ಈ ಕಳ್ಳತನಕ್ಕೆ ತನ್ನ ಸಹಚರರನ್ನು ಕರೆಸಿ ಕತ್ಯ ನಡೆಸಿದ್ದಾನೆ.
ಪ್ರಕರಣ ಸಂಬಂಧ ಆರೋಪಿಗಳಿಂದ 22 ಲಕ್ಷ ಮೌಲ್ಯದ ಚಿನ್ನಾಭರಣವನ್ನ ವಶಕ್ಕೆ ಪಡೆಯಲಾಗಿದ್ದು, ಇಲ್ಲಿನ ವಿವೇಕನಗರ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.







