ಭಾರತ ವಿರುದ್ಧ ಮೊದಲೆರಡು ಏಕದಿನ: ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡ ಪ್ರಕಟ

ಜಮೈಕಾ,ಜೂ.19: ಭಾರತ ವಿರುದ್ಧ ಜೂ.23 ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗೆ 13 ಸದಸ್ಯರನ್ನು ಒಳಗೊಂಡ ವೆಸ್ಟ್‌ಇಂಡೀಸ್ ತಂಡವನ್ನು ಸೋಮವಾರ ಆಯ್ಕೆ ಮಾಡಲಾಗಿದೆ.
ಜೂನ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿರುವ ತಂಡವನ್ನೇ ಭಾರತ ವಿರುದ್ಧ ಸರಣಿಗೆ ಆಯ್ಕೆ ಮಾಡಲಾಗಿದೆ.
ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 180 ರನ್‌ಗಳಿಂದ ಸೋತಿರುವ ಭಾರತ ಲಂಡನ್‌ನಿಂದ ವಿಂಡೀಸ್‌ಗೆ ಪ್ರಯಾಣ ಬೆಳೆಸಲಿದೆ.
ಅಫ್ಘಾನಿಸ್ತಾನ ವಿರುದ್ಧ ಸರಣಿಯನ್ನು 1-1 ರಿಂದ ಡ್ರಾಗೊಳಿಸಿರುವ ವಿಂಡೀಸ್ ಅಂಕ ಗಳಿಸಲು ವಿಫಲವಾಗಿದ್ದು, ಏಕದಿನ ರ್ಯಾಂಕಿಂಗ್‌ನಲ್ಲಿ 9ನೆ ಸ್ಥಾನದಲ್ಲಿ ಮುಂದುವರಿದಿದೆ.
2019ರ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಬೇಕಾದರೆ ವಿಂಡೀಸ್‌ಗೆ ಐಸಿಸಿ ರ್ಯಾಂಕಿಂಗ್‌ನಲ್ಲಿ ಅಗ್ರ-8ರಲ್ಲಿ ಸ್ಥಾನ ಪಡೆಯಬೇಕು. ಭಾರತ ವಿರುದ್ಧ ಸರಣಿಯು ವಿಂಡೀಸ್‌ಗೆ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಇರುವ ಅಪೂರ್ವ ಅವಕಾಶವಾಗಿದೆ.
ವೆಸ್ಟ್‌ಇಂಡೀಸ್ ಏಕದಿನ ತಂಡ:
ಜೇಸನ್ ಹೋಲ್ಡರ್(ನಾಯಕ), ದೇವೇಂದ್ರ ಬಿಶೂ, ಜೋನಾಥನ್ ಕಾರ್ಟರ್, ರಸ್ಟನ್ ಚೇಸ್, ಮಿಗುಯೆಲ್ ಕಮ್ಮಿನ್ಸ್, ಶೈ ಹೋಪ್, ಎ.ಜೋಸೆಫ್, ಎವಿನ್ ಲೂವಿಸ್, ಜೇಸನ್ ಮುಹಮ್ಮದ್, ಅಶ್ಲೆ ನರ್ಸ್, ಕೀರನ್ ಪೊವೆಲ್, ರೊವ್‌ಮನ್ ಪೊವೆಲ್, ಕೆಸ್ರಿಕ್ ವಿಲಿಯಮ್ಸ್.







