ದುಃಖದ ನಡುವೆಯೂ ಪಾಕ್ ವಿರುದ್ಧ ಪಂದ್ಯವನ್ನಾಡಿದ್ದ ಸುನೀಲ್

ಬೆಂಗಳೂರು, ಜೂ.19: ಲಂಡನ್‌ನಲ್ಲಿ ರವಿವಾರ ನಡೆದ ಹೀರೋ ಹಾಕಿ ವರ್ಲ್ಡ್ ಲೀಗ್ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 7-1 ಅಂತರದಿಂದ ಸೋಲಿಸಿ ಕ್ರಿಕೆಟ್‌ನಲ್ಲಿ ಹೋದ ಮಾನವನ್ನು ಹಾಕಿ ಮೂಲಕ ಗಳಿಸಿಕೊಟ್ಟಿತ್ತು. ತಂಡದ ಹಿರಿಯ ಆಟಗಾರ ಎಸ್.ವಿ. ಸುನೀಲ್ ಅವರು ಕುಟುಂಬ ಸದಸ್ಯರೊಬ್ಬರ ಸಾವಿನ ದುಃಖದಲ್ಲೂ ಪಾಕ್ ವಿರುದ್ಧ ಪಂದ್ಯವನ್ನು ಆಡುವ ಮೂಲಕ ಗಮನ ಸೆಳೆದರು.
ಪಾಕ್ ವಿರುದ್ಧ ಅತ್ಯಂತ ಮಹತ್ವದ ಪಂದ್ಯ ಆರಂಭವಾಗಲು ಕೆಲವೇ ಗಂಟೆ ಬಾಕಿ ಇರುವಾಗ ಸುನೀಲ್‌ಗೆ ದುಃಖದ ಸುದ್ದಿಯೊಂದು ತಲುಪಿತ್ತು. ದೀರ್ಘಕಾಲದಿಂದ ಅಸೌಖ್ಯದಿಂದ ಬಳಲುತ್ತಿದ್ದ ಸುನೀಲ್‌ರ ಭಾವ ಗಣೇಶ್ ಆಚಾರ್ಯ ರವಿವಾರ ನಿಧನರಾಗಿದ್ದರು.
ಎಪ್ರಿಲ್‌ನಲ್ಲಿ ನಡೆದ ಸುಲ್ತಾನ್ ಅಝ್ಲಾನ್ ಶಾ ಹಾಕಿ ಕಪ್ ವೇಳೆ ತಂದೆಯನ್ನು ಕಳೆದುಕೊಂಡಿದ್ದ ಸುನೀಲ್‌ಗೆ ಮತ್ತೊಂದು ಶಾಕ್ ಸುದ್ದಿ ಯಿಂದ ವಿಚಲಿತರಾದರು. ಆದರೆ ತಂಡದ ಸ್ಟಾರ್ ಆಟಗಾರ ಸುನೀಲ್ ತನ್ನಲ್ಲಿನ ದುಗುಡವನ್ನು ವೃತ್ತಿಯ ಮೇಲೆ ತೋರಲಿಲ್ಲ. ದುಃಖವನ್ನು ಅದುಮಿಟ್ಟುಕೊಂಡು ಹಾಕಿ ಮೈದಾನಕ್ಕೆ ಇಳಿದರು. ದೇಶಕ್ಕಾಗಿ ಆಡಿದರು.
ದೇವರು ನನ್ನನ್ನು ಹಲವು ರೀತಿಯಲ್ಲಿ ಪರೀಕ್ಷಿಸುತ್ತಿದ್ದಾರೆ. ಕಳೆದ ಬಾರಿ ನನ್ನ ತಂದೆ, ಈ ಬಾರಿ ನನ್ನ ಭಾವ ನನ್ನನ್ನು ಅಗಲಿದ್ದಾರೆ. ನನಗೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಟೂರ್ನಮೆಂಟ್ ಮುಗಿದ ತಕ್ಷಣ ತವರುಪಟ್ಟಣಕ್ಕೆ ವಾಪಸಾಗುವೆ ಎಂದು ಪಾಕ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಬಳಿಕ ಸುನೀಲ್ ಹೇಳಿದ್ದಾರೆ.
ಟೂರ್ನಿಯ ಮೊದಲಾರ್ಧದಲ್ಲಿ ಸತ್ಬೀರ್ ಸಿಂಗ್ ಜೊತೆಗೂಡಿ ತಲ್ವಿಂದರ್ ಸಿಂಗ್‌ಗೆ ಗೋಲು ಬಾರಿಸಲು ಸುನೀಲ್ ನೆರವಾಗಿದ್ದರು.
ಕೊಡಗಿನ ಕುವರ ಸುನೀಲ್ 2007ರಲ್ಲಿ ಅಂತಾರಾಷ್ಟ್ರೀಯ ಹಾಕಿಗೆ ಕಾಲಿಟ್ಟಿದ್ದರು. ಕಳೆದ ವರ್ಷ ಲಂಡನ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಬೆಳ್ಳಿ ಗೆಲ್ಲಲು ನೆರವಾಗಿದ್ದ ಸುನೀಲ್ ತನ್ನ ವೃತ್ತಿಜೀವನದಲ್ಲಿ 2014ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ, 2015ರ ವರ್ಲ್ಡ್ ಲೀಗ್ ಫೈನಲ್‌ನಲ್ಲಿ ಕಂಚು ಜಯಿಸಿದ್ದರು ಹಾಗೂ 2012 ಹಾಗೂ 2016ರಲ್ಲಿ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.
28ರ ಹರೆಯದ ಸುನೀಲ್ ಮಾರ್ಚ್‌ನಲ್ಲಿ ವರ್ಷದ ಏಷ್ಯನ್ ಹಾಕಿ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು. ಇತ್ತೀಚೆಗಷ್ಟೇ 200 ಪಂದ್ಯಗಳನ್ನು ಆಡಿದ ಸಾಧನೆ ಮಾಡಿದ್ದರು.







