ಕೇಸು ದಾಖಲಿಸಲು ಹೇಳಿರುವುದರಲ್ಲಿ ತಪ್ಪಿಲ್ಲ: ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮರ್ಥನೆ

ಪುತ್ತೂರು, ಜೂ.20 : ಪ್ರಚೋದನಾಕಾರಿ ಭಾಷಣ ಮಾಡಿ ಹಿಂದೂ ಯುವಕರನ್ನು ಪ್ರಚೋದಿಸಿ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕದಡುವ ಕೆಲಸವನ್ನು ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಬಿಜೆಪಿ ಸಂಘ ಪರಿವಾರದ ನಾಯಕರು ಮಾಡುತ್ತಿದ್ದು, ಕಲ್ಲಡ್ಕದಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಕೇಸು ದಾಖಲಿಸಿಕೊಳ್ಳುವಂತೆ ಅದೇ ಕ್ಷೇತ್ರದವರಾದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಪೊಲೀಸರಿಗೆ ಸೂಚನೆ ನೀಡಿರುವುದನ್ನು ನಾವು ಸಮರ್ಥಿಸುವ ಜೊತೆಗೆ ಸಚಿವರಿಗೆ ಬೆಂಬಲ ನೀಡುತ್ತೇವೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ ತಿಳಿಸಿದ್ದಾರೆ.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಲಡ್ಕ ಗಲಭೆಯ ಆರೋಪಿಗಳ ಪರವಾಗಿ ಮಾತನಾಡುತ್ತಿರುವವರೇ ಇದೀಗ ಸಚಿವ ರಮಾನಾಥ ರೈ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಈಗ ಇಷ್ಟೆಲ್ಲಾ ಮಾತನಾಡುವ, ಪ್ರತಿಭಟನೆಗಳಿಯುವ ಮಂದಿ ಸಂಸದ ನಳಿನ್‌ಕುಮಾರ್ ಅವರು ಜಿಲ್ಲೆಗೆ ಬೆಂಕಿ ಕೊಡುತ್ತೇವೆ ಎಂದು ಹೇಳುವಾಗ ಎಲ್ಲಿದ್ದರು ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಯನ್ನು ಕೆಡಿಸಿ ಮತಪಡೆಯಲು ಮಾಡುವ ಹುನ್ನಾರ ಇದಾಗಿದೆ ಎಂದ ಅವರು, ಈ ವಿಚಾರದಲ್ಲಿ ಪುತ್ತೂರಿನ ಶಾಸಕಿ ಶಕುಂತಳಾ ಶೆಟ್ಟಿ ಅವರ ಬೆಂಬಲವೂ ರಮಾನಾಥ ರೈ ಅವರಿಗಿದೆ ಎಂದರು.
ನಳಿನ್ ಮತ್ತು ಶೋಭಾ ಪುಕ್ಕಲರು: ರಾಮಚಂದ್ರ ಅಮಳ:
ಕಲ್ಲಡ್ಕದಲ್ಲಿ ನಡೆದ ಘಟನೆಯಿಂದಾಗಿ ಜಿಲ್ಲೆಯಲ್ಲಿ ಹಿಂದೂ ಸಮಾಜ ಭಯಭೀತವಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಹಿಂದೂ ಸಮಾಜವನ್ನು ಭಯಭೀತಗೊಳಿಸುವ ಕೆಲಸವನ್ನು ಸಂಸದರಾದ ನಳಿನ್‌ಕುಮಾರ್ ಕಟೀಲು ಮತ್ತು ಶೋಭಾ ಕರಂದ್ಲಾಜೆ ಅವರು ಮಾಡಿದ್ದಾರೆ. ನಾವೆಲ್ಲರೂ ಹಿಂದೂಗಳಾಗಿದ್ದು, ನಾವೇನೂ ಭಯಭೀತರಾಗಿಲ್ಲ. ಭಯಭೀತಿಯಾಗಿರುವುದು ನಳಿನ್‌ಕುಮಾರ್ ಮತ್ತು ಶೋಭಾ ಕರಂದ್ಲಾಜೆ ಅವರಿಗೆ. ಅವರಿಬ್ಬರೂ ಪುಕ್ಕಲರು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಅಮಳ ಅವರು ಲೇವಡಿ ಮಾಡಿದರು.