ರಾಜ್ಯದ ಏಳು ನಗರಗಳಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಸ್ಥಾಪನೆಗೆ ವಿದೇಶಾಂಗ ಇಲಾಖೆ ಅನುಮತಿ

ಶಿವಮೊಗ್ಗ, ಜೂ. 20: ಶಿವಮೊಗ್ಗ ಸೇರಿದಂತೆ ರಾಜ್ಯದ ಏಳು ನಗರಗಳಲ್ಲಿ ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರ (ಪಿ.ಓ.ಪಿ.ಎಸ್.ಕೆ.) ಸ್ಥಾಪನೆಗೆ ಕೇಂದ್ರ ವಿದೇಶಾಂಗ ಇಲಾಖೆ ಅನುಮತಿ ನೀಡಿದೆ. ಬಳ್ಳಾರಿ, ಬೀದರ್, ರಾಯಚೂರು, ತುಮಕೂರು, ಉಡುಪಿ ಹಾಗೂ ವಿಜಯಪುರ ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭವಾಗುತ್ತಿರುವ ಇತರೆ ನಗರಗಳಾಗಿವೆ.
ಪ್ರಥಮ ಹಂತದಲ್ಲಿ ದೇಶದ 86 ನಗರಗಳಲ್ಲಿ ಪಿ.ಓ.ಪಿ.ಎಸ್.ಕೆ. ಸ್ಥಾಪನೆಗೆ ವಿದೇಶಾಂಗ ಇಲಾಖೆಯು ಅನುಮತಿ ನೀಡಿತ್ತು. ಇದೀಗ ಎರಡನೇ ಹಂತದಲ್ಲಿ 149 ಕೇಂದ್ರಗಳ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿದ್ದು, ಇದರಲ್ಲಿ ಶಿವಮೊಗ್ಗ ಸೇರಿದಂತೆ ಕರ್ನಾಟಕದ ಏಳು ನಗರಗಳಿವೆ.
ವರದಿ ಕೇಳಿತ್ತು: ಇತ್ತೀಚೆಗೆ ವಿದೇಶಾಂಗ ಸಚಿವಾಲಯವು ಶಿವಮೊಗ್ಗ ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ತೆರೆಯಲು ಚಿಂತನೆ ನಡೆಸಿತ್ತು. ಇದಕ್ಕೆ ಪೂರ್ವಭಾವಿಯಾಗಿ ಅಂಚೆ ಕಚೇರಿಯಲ್ಲಿ ಕೇಂದ್ರ ಸ್ಥಾಪನೆಗೆ ಅಗತ್ಯ ಸೌಲಭ್ಯಗಳಿವೆಯೇ? ಎಂಬುವುದರ ಮಾಹಿತಿ ನೀಡುವಂತೆ ಅಂಚೆ ಕಚೇರಿಗೆ ಪತ್ರ ಕೂಡ ಬರೆದಿತ್ತು ಎನ್ನಲಾಗಿದೆ.
ಸಂತಸ: ಶಿವಮೊಗ್ಗ ನಗರದ ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಸ್ಥಾಪನೆಗೆ ವಿದೇಶಾಂಗ ಇಲಾಖೆ ಮುಂದಾಗಿರುವುದಕ್ಕೆ ಸ್ಥಳೀಯ ನಾಗರೀಕರು ಸಂತಸ ವ್ಯಕ್ತಪಡಿಸುತ್ತಿದ್ದು, ಪಾಸ್‌ಪೋರ್ಟ್ ಪಡೆಯಲು ಇತರೆ ನಗರಗಳಿಗೆ ಓಡಾಡುವ ಕಷ್ಟ ತಪ್ಪಲಿದೆ ಎಂದು ಹೇಳುತ್ತಿದ್ದಾರೆ.
’ಪಾಸ್‌ಪೋರ್ಟ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ದಾಖಲೆಗಳ ಪರಿಶೀಲನೆ ಹಾಗೂ ಬಯೋ ಮೆಟ್ರಿಕ್ ವಿವರ ನೀಡಲು ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಪಾಸ್‌ಪೋಟ್ ಸೇವಾ ಕೇಂದ್ರಕ್ಕೆ ತೆರಳಬೇಕಾಗಿತ್ತು. ನಿಗದಿತ ದಿನಾಂಕ, ಸಮಯದಂದೆ ಈ ಕೇಂದ್ರಗಳಿಗೆ ಹೋಗಬೇಕಾಗಿತ್ತು. ಇದರಿಂದ ಸಾಕಷ್ಟು ಸಮಯ, ಹಣ ವ್ಯರ್ಥವಾಗುತ್ತಿತ್ತು. ಕೆಲವೊಮ್ಮೆ ನಾನಾ ಕಾರಣಗಳಿಂದ ಕೇಂದ್ರಗಳಲ್ಲಿ ಪಾಸ್‌ಪೋರ್ಟ್ ಮಂಜೂರಾಗುತ್ತಿರಲಿಲ್ಲ. ಇದರಿಂದ ಕೇಂದ್ರಗಳಿಗೆ ನಿರಂತರವಾಗಿ ಅಲೆದಾಡುವಂತಾಗುತ್ತಿತ್ತು. ಇದೀಗ ಶಿವಮೊಗ್ಗದಲ್ಲಿಯೇ ಕೇಂದ್ರ ಸ್ಥಾಪನೆ ಮಾಡುವುದರಿಂದ ಜಿಲ್ಲೆಯ ನಾಗರೀಕರಿಗೆ ಪಾಸ್‌ಪೋರ್ಟ್ ಮಾಡಿಸುವ ಕಾರ್ಯ ಮತ್ತಷ್ಟು ಸರಳವಾಗಲಿದೆ. ಇದರಿಂದ ಹೆಚ್ಚಿನ ಜನರು ಪಾಸ್‌ಪೋರ್ಟ್ ಮಾಡಿಸಲು ಸಹಾಯಕವಾಗುತ್ತದೆ ಎಂದು ನಾಗರೀಕರು ಅಭಿಪ್ರಾಯಪಡುತ್ತಾರೆ.
ಹಿಂದಿನ ಬೇಡಿಕೆ: ಬದಲಾದ ಸನ್ನಿವೇಶದಲ್ಲಿ ಶಿವಮೊಗ್ಗ ನಗರ ಹಾಗೂ ಜಿಲ್ಲೆಯಿಂದ ಉದ್ಯೋಗ, ಶಿಕ್ಷಣ, ಪ್ರವಾಸ ಸೇರಿದಂತೆ ನಾನಾ ಕಾರ್ಯಗಳ ನಿಮಿತ್ತ ವಿದೇಶಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಪಾಸ್‌ಪೋರ್ಟ್ ಮಾಡಿಸುವವರ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಶಿವಮೊಗ್ಗ ನಗರದಲ್ಲಿಯೇ ಪಾಸ್‌ಪೋರ್ಟ್ ಸೇವಾ ಕೇಂದ್ರ ತೆರೆಯಬೇಕೆಂಬ ಬೇಡಿಕೆ ಸಾರ್ವಜನಿಕರದ್ದಾಗಿತ್ತು.







