ಗಿರಿಜನರ ಹಾಡಿಗಳಿಗೆ ಅನುದಾನ ಹೆಚ್ಚಿಸಿ: ಮೋಟಮ್ಮ

ಬೆಂಗಳೂರು, ಜೂ.20: ಚಿಕ್ಕಮಗಳೂರು ಜಿಲ್ಲೆಯ ಗಿರಿಜನ ಹಾಡಿಗಳಿಗೆ ನೀಡಿರುವ 10 ಕೋಟಿ ರೂ.ಅನುದಾನವನ್ನು 20 ಕೋಟಿ ರೂ.ಗಳಿಗೆ ಏರಿಸಬೇಕೆಂದು ವಿಧಾನಪರಿಷತ್ ಕಾಂಗ್ರೆಸ್ ಸದಸ್ಯೆ ಮೋಟಮ್ಮ ಒತ್ತಾಯಿಸಿದ್ದಾರೆ.
ಮಂಗಳವಾರ ವಿಧಾನಪರಿಷತ್‌ನಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ ಹಾಡಿಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ 10 ಕೋಟಿ ರೂ.ಗಳ ವಿಶೇಷ ಪ್ಯಾಕೇಜನ್ನು ಒದಗಿಸಲಾಗಿತ್ತು. ಆದರೆ, ಅದರ ಸಂಪೂರ್ಣ ಹಣ ಕೇವಲ ಕಾಂಕ್ರಿಟ್ ರಸ್ತೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಹಾಡಿಗಳಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಸಮಸ್ಯೆಗಳನ್ನು ಕಣ್ಣಾರೆ ಕಂಡರು. ಹೀಗಾಗಿ ಅಲ್ಲಿನ ಮೂಲಭೂತ ಅವಶ್ಯಕತೆಗಳ ಅಭಿವೃದ್ಧಿಗೆ 10ಕೋಟಿ ರೂ. ಕೊಟ್ಟರು. ಆದರೆ, ಅಲ್ಲಿನ ಮೂಲಭೂತ ಅಗತ್ಯಗಳಾದ ಮನೆ, ವಿದ್ಯುತ್ ಹಾಗೂ ಕುಡಿಯುವ ನೀರಿಗೆ ಯಾವುದೇ ವ್ಯವಸ್ಥೆಯಿಲ್ಲ. ಕೇವಲ ರಸ್ತೆ ಮಾತ್ರ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಈಗಾಗಲೆ ಹಾಡಿಗಳ ರಸ್ತೆ ನಿರ್ಮಿಣಕ್ಕೆ 10ಕೋಟಿ ರೂ.ಖರ್ಚಾಗಿದೆ. ಹೀಗಾಗಿ ಪುನಃ 10 ಕೋಟಿ ರೂ. ಅನುದಾನ ನೀಡಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಅಗತ್ಯಗಳನ್ನು ಪೂರೈಸಬೇಕಾಗಿದೆ ಹಾಗೂ 10ಕೋಟಿ ರೂ.ವನ್ನು ಕೇವಲ ರಸ್ತೆಗೆ ಬಳಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆಂಜನೇಯ, ಹಾಡಿಗಳಲ್ಲಿ ಮೂಲಭೂತ ಅಗತ್ಯಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ 10ಕೋಟಿ ರೂ.ವನ್ನು ನೀಡಲಾಗಿತ್ತು. ಹಾಗೂ ಈ ಹಣವನ್ನು ನಿಯಮದ ಪ್ರಕಾರವೇ ಖರ್ಚು ಮಾಡಬೇಕೆಂದು ತಿಳಿಸಲಾಗಿತ್ತು. ನಿಯಮ ಉಲ್ಲಂಘನೆಯಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.







