‘ಕೌಶಲ್ಯ ಮಾಹಿತಿ ಕೇಂದ್ರ’ ಮೇಲ್ದರ್ಜೆಗೆ: ಮುರುಳಿಧರ್ ಹಾಲಪ್ಪ
ಬೆಂಗಳೂರು, ಜೂ.20: ಉದ್ಯೋಗಾವಕಾಶಗಳ ಮಾಹಿತಿ, ಕೌಶಲ್ಯ ತರಬೇತಿ ನೀಡುವ ಹಿನ್ನಲೆಯಲ್ಲಿ ರಾಜ್ಯದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳನ್ನು ‘ಕೌಶಲ್ಯ ಮಾಹಿತಿ ಕೇಂದ್ರ’ಗಳಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು, ಜುಲೈ 15ರಿಂದ ಕಾರ್ಯಾರಂಭ ಮಾಡಲಿವೆ ಎಂದು ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳಿಧರ್ ಹಾಲಪ್ಪ ಇಂದಿಲ್ಲಿ ಹೇಳಿದ್ದಾರೆ.
ಮಂಗಳವಾರ ನಗರದ ಮಲ್ಲೇಶ್ವರನ ಖಾಸಗಿ ಹೊಟೇಲ್‌ನಲ್ಲಿ ಕಾನ್ಫೆಡರೇಶನ್ ಆಫ್ ವುಮೆನ್ಸ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ (ಸಿಡಬ್ಲೂಸಿಸಿಐ) ಆಯೋಜಿಸಿದ್ದ ‘ಕೌಶಲ್ಯ ಕರ್ನಾಟಕ-ಉದ್ಯಮದಲ್ಲಿ ಮಹಿಳೆಯರ ಜ್ಞಾನ ಮತ್ತು ಕೌಶಲ್ಯಗಳ ಉನ್ನತೀಕರಣ’ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೌಶಲ್ಯ ಮಾಹಿತಿ ಕೇಂದ್ರಗಳಲ್ಲಿ ಕಂಪ್ಯೂಟರ್ ತರಬೇತಿ, ಸಂವಹನ ಕಲೆ, ಸಂದರ್ಶನ ಎದುರಿಸುವ ಕೌಶಲ್ಯಗಳು, ಇಂಗ್ಲಿಷ್ ಸಂವಹನ ಕುರಿತು ತರಬೇತಿ ನೀಡಲಾಗುವುದು. ನೋಂದಣಿ ಮಾಡಿದವರಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾದ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಒದಗಿಸಲಾಗುವುದು. ಅದೇ ರೀತಿ, ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ವಿಧಾನದ ಬಗೆಗೂ ಹೇಳಿಕೊಡಲಾಗುವುದು. ಅದಕ್ಕಾಗಿ ನುರಿತ ಸಿಬ್ಬಂದಿ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉದ್ಯೋಗಾಕಾಂಕ್ಷಿಗಳಿಗೆ ಕೌಶಲ್ಯಾಧಾರಿತ ತರಬೇತಿ ನೀಡಿ ಹೆಚ್ಚು ಉದ್ಯೋಗ ಗಿಟ್ಟಿಸಲು ಅನುವು ಮಾಡುವ ಉದ್ದೇಶದಿಂದ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಇದೀಗ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳನ್ನು ಕೌಶಲ್ಯ ಮಾಹಿತಿ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಈ ಕೇಂದ್ರದಲ್ಲಿ ಉದ್ಯೋಗಾಕಾಂಕ್ಷಿಗಳು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಮುರುಳಿಧರ್ ಹಾಲಪ್ಪ ಹೇಳಿದರು.
ಐಟಿಐ, ಡಿಪ್ಲಮೋ ಪದವೀಧರರನ್ನು ಇಂದು ಖಾಸಗಿ ಕಂಪನಿಗಳಲ್ಲಿ ಅತ್ಯಂತ ಕಡಿಮೆ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದೆ. ಅಂತವರಿಗೆ ಮತ್ತಷ್ಟು ತರಬೇತಿ ನೀಡಿ ವಿದೇಶಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಆಸಕ್ತರಿಗೆ ಕೌಶಲ್ಯಾಧಾರಿತ ತರಬೇತಿ, ಸ್ವಯಂ ಉದ್ಯೋಗ, ಉದ್ಯೋಗಾವಕಾಶಗಳ ಮಾಹಿತಿ ನೀಡುವ ಉದ್ದೇಶದಿಂದ ನಿಗಮದಲ್ಲಿ ನೋಂದಣಿ ಆರಂಭಿಸಿದ್ದೇವೆ. ಕೇವಲ 21 ದಿನಗಳಲ್ಲಿ 5 ಲಕ್ಷ ಮಂದಿ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ ಮಾತನಾಡಿ, ಮಹಿಳೆಯರ ಸ್ವಾವಲಂಬನೆಗಾಗಿ ರಾಜ್ಯ ಸರಕಾರ ಸಾಕಷ್ಟು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ, ಇವುಗಳ ಬಗ್ಗೆ ಕೆಳವರ್ಗ ಮತ್ತು ಗ್ರಾಮೀಣ ಭಾಗದ ಮಹಿಳೆಯರಿಗೆ ಅರಿವಿಲ್ಲ. ಹಾಗಾಗಿ ಆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ. ಅಲ್ಲದೆ, ಶೇ.33ರ ಮೀಸಲಾತಿ ಕೇವಲ ಶಿಕ್ಷಿತರಿಗೆ ಮಾತ್ರ ಎನ್ನುವಂತಾಗಿದೆ ಎಂದರು.
ಕಾರ್ಯಾಗಾರದಲ್ಲಿ ಸಿಡಬ್ಲೂಸಿಸಿಐ ಅಧ್ಯಕ್ಷೆ ಐಶ್ವರ್ಯ ನಂದ್ಯಪ್ಪ, ಉಪಾಧ್ಯಕ್ಷೆ ಜಯಲಕ್ಷ್ಮೀ ವೆಂಕಟನಾರಾಯಣ, ಎಸ್‌ಐಡಿಬಿಐ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಆನಂದಿ ಚರಣ್ ಸಾಹು, ಎಸ್‌ಬಿಐ ಸಹಾಯಕ ಪ್ರಧಾನ ವ್ಯವಸ್ಥಾಪಕ ಪಿ.ಎಸ್.ನಾಗರಾಜ್ ಸೇರಿ ಪ್ರಮುಖರು ಹಾಜರಿದ್ದರು.







