ತುಂಬೆ: ಬಾಲಕನ ಮೇಲೆ ತಲವಾರಿನಿಂದ ದಾಳಿ ನಡೆಸಿದ ದುಷ್ಕರ್ಮಿಗಳು

ಬಂಟ್ವಾಳ, ಜೂ. 20: ಸ್ನೇಹಿತನ ಬೈಕ್‍ನಲ್ಲಿ ತೆರಳುತ್ತಿದ್ದ ಬಾಲಕನೋರ್ವನಿಗೆ ಇನ್ನೊಂದು ಬೈಕ್‍ನಲ್ಲಿ ಬಂದ ಇಬ್ಬರು ತಲವಾರು ಬೀಸಿ ಹಲ್ಲೆಗೆ ಮುಂದಾಗಿರುವ ಘಟನೆ ತುಂಬೆ ಗ್ರಾಮದ ಕೆಳಗಿನ ತುಂಬೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ತುಂಬೆ ನಿವಾಸಿ ಉಮರ್ ಎಂಬವರ ಪುತ್ರ ಉನೈತ್ ಎಂಬಾತ ತನ್ನ ಸ್ನೇಹಿತ ಫಯಾಝ್ ಎಂಬಾತನ ಬೈಕ್‍ನಲ್ಲಿ ಕೆಲಸ ಬಿಟ್ಟು ಕಣ್ಣೂರಿನಿಂದ ತುಂಬೆ ಕಡೆಗೆ ತೆರಳುತ್ತಿದ್ದಾಗ ಕೆಳಗಿನ ತುಂಬೆ ಬಿ.ಎ. ಕಾಲೇಜು ಸಮೀಪ ಈ ಘಟನೆ ನಡೆದಿದೆ ಎನ್ನಲಾಗಿದೆ.
ಉನೈತ್ ಬೈಕ್‍ನ ಹಿಂಬದಿ ಕೂತಿದ್ದು ಹಿಂದಿನಿಂದ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಉನೈತ್‍ನನ್ನು ಗುರಿಯಾಗಿಸಿ ಬೀಸಿದ ತಲವಾರು ದುಷ್ಕರ್ಮಿಗಳಿದ್ದ ಬೈಕ್‍ನ ಡೂಮ್‍ಗೆ ತಾಗಿ ಶಬ್ದ ಕೇಳಿದಾಗ ಉನೈತ್ ಹಿಂದಿರುಗಿ ನೋಡಿದ್ದಾನೆ. ಹಿಂದಿನ ಬೈಕ್‍ನ ಹಿಂಬದಿಯಲ್ಲಿ ಕೂತ ದುಷ್ಕರ್ಮಿ ಮತ್ತೊಮ್ಮೆ ತಲವಾರು ಬೀಸಿ ದಾಳಿಗೆ ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ. ಅಪಾಯವನ್ನು ಅರಿತ ಉನೈತ್ ಮತ್ತು ಫಯಾಝ್ ತಪ್ಪಿಸಿಕೊಂಡು ಪಾರಾಗಿದ್ದು ಘಟನೆಯಿಂದ ಹೆದರಿ ಅಸ್ವಸ್ಥಗೊಂಡ ಉನೈತ್‍ನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿದ್ದರು ಎನ್ನಲಾಗಿದೆ.
ಹಿಂದೂ ಯುವತಿಯೋರ್ವಳ ಕೈ ಎಳೆದ ಆರೋಪದಲ್ಲಿ ಬಂಧನವಾಗಿದ್ದ ಉನೈತ್ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಆ ಬಳಿಕ ಆತನನ್ನು ಸಂಘಪರಿವಾರದ ಕಾರ್ಯಕರ್ತರು ದುರುಗುಟ್ಟಿ ನೋಡುವುದು ಹಾಗೂ ಬೆದರಿಕೆಗಳು ಹಾಕುವುದು ನಡೆಯುತ್ತಿತ್ತು ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಉನ್ನತ ಪೊಲೀಸ್ ಅಧಿಕಾರಿಗಳು ತುಂಬೆ ಆಸ್ಪತ್ರೆಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ತುಂಬೆಯಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.





