ಸಿಬ್ಬಂದಿ ವೇತನಕ್ಕೆ ನಗದು ನೀಡಿದ ಆರೋಪ: ಸಮಯ ಸುದ್ದಿ ವಾಹಿನಿ ಕಚೇರಿ ಮೇಲೆ ಐಟಿ ದಾಳಿ

ಬೆಂಗಳೂರು, ಜೂ.20: ವಾಹನ ಚಾಲಕರಿಗೆ ನಗದು ಮೂಲಕವೇ ನಾಲ್ಕು ತಿಂಗಳಿನಿಂದ ವೇತನ ನೀಡುತ್ತಿದ್ದ ಆರೋಪದ ಮೇಲೆ ಸಮಯ ಸುದ್ದಿ ವಾಹಿನಿ ಕಚೇರಿ ಮೇಲೆ ಆದಾಯ ತೆರಿಗೆ(ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಂಗಳವಾರ ನಗರದ ಕಸ್ತೂರ ಬಾ ರಸ್ತೆಯಲ್ಲಿರುವ ಸಮಯ ಸುದ್ದಿ ವಾಹಿನಿ ಪ್ರಧಾನ ಕಚೇರಿ ಆರ್‌ಟಿ ನಗರದಲ್ಲಿರುವ ಕಚೇರಿ ಮೇಲೆ ಬೆಳಗ್ಗೆ 11 ಗಂಟೆ ಸುಮಾರಿಗೆ ಹತ್ತಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲಿಸಿದರು ಎಂದು ತಿಳಿದುಬಂದಿದೆ.
ಸಮಯ ಸುದ್ದಿ ವಾಹಿನಿಯ ಮುಖ್ಯಸ್ಥ ವಿಜಯ್ ಟಾಟಾ ಅವರನ್ನು ಐಟಿ ಅಧಿಕಾರಿಗಳು 2 ಗಂಟೆಗೂ ಅಧಿಕ ಕಾಲ ತೀವ್ರ ವಿಚಾರಣೆ ನಡೆಸಿದರು. ಜತೆಗೆ 30ಕ್ಕೂ ಹೆಚ್ಚು ಸಿಬ್ಬಂದಿಗೆ ಉದ್ಯೋಗ ಸಂಬಂಧ ಅರ್ಜಿ ನಮೂನೆಯೊಂದನ್ನು ನೀಡಿ ಬರೆಯಲು ಸೂಚಿಸಿದರು ಎನ್ನಲಾಗಿದೆ.
ನೋಟು ನಿಷೇಧದ ನಂತರ ಭಾರಿ ಪ್ರಮಾಣದ ನಗದು ವರ್ಗಾವಣೆ ನಡೆದಿತ್ತು. ಸಿಬ್ಬಂದಿಗೆ ಸಂಬಳವನ್ನು ನೇರವಾಗಿ ನಗದಿನ ಮೂಲಕ ನೀಡಲಾಗುತ್ತಿತ್ತು ಎನ್ನಲಾಗಿದೆ. ಜೊತೆಗೆ ನೌಕರರ ಮೂಲ ವೇತನದಲ್ಲಿ ಕಡಿತ ಮಾಡಿದ್ದ ಟಿಡಿಎಸ್ ಹಣವನ್ನು ಐಟಿ ಇಲಾಖೆಗೆ ಪಾವತಿ ಮಾಡಿರಲಿಲ್ಲ ಎಂದು ಹೇಳಲಾಗಿದೆ.





