ಟ್ರಾಫಿಕ್ ಅಟೋಮೇಶನ್ ಎನ್‌ಫೋರ್ಸ್‌ಮೆಂಟ್ ಸೆಂಟರ್ ಉದ್ಘಾಟನೆ
ಟ್ರಾಫಿಕ್ ನಿಯಮ ಉಲ್ಲಂಘನೆ ಸಹಿತ ಅಪರಾಧ ಚಟುವಟಿಕೆ ಪತ್ತೆಗೆ ಸಹಕಾರಿ

ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಅಳವಡಿಕೆ
ನಗರದ 75 ಕಡೆ ಸಿಸಿ ಕ್ಯಾಮೆರಾ ಅಳವಡಿಕೆ
ಮಂಗಳೂರು, ಜೂ.20: ನಗರದ ಕದ್ರಿ ಠಾಣೆಯಲ್ಲಿ ಸ್ಥಾಪಿಸಲಾದ ಟ್ರಾಫಿಕ್ ಅಟೋಮೇಶನ್ ಎನ್‌ಫೋರ್ಸ್‌ಮೆಂಟ್ ಸೆಂಟರ್ ಮಂಗಳವಾರ ಸಂಜೆ ಉದ್ಘಾಟನೆಗೊಂಡಿತು.
ಮಂಗಳೂರು ನಗರ ಪೊಲೀಸ್ ಉಪಾಯುಕ್ತರಾದ ಕೆ.ಎಂ.ಶಾಂತರಾಜು ಮತ್ತು ಹನುಮಂತರಾಯ ಈ ಸೆಂಟರ್‌ಗೆ ಚಾಲನೆ ನೀಡಿದರು. ಈ ಸಂದರ್ಭ ಎಸಿಪಿಗಳಾದ ತಿಲಕಚಂದ್ರ, ಉದಯ ಎಂ.ನಾಯಕ್, ಶ್ರುತಿ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ ಪ್ರಥಮ: ರಾಜ್ಯದ ಪ್ರಮುಖ ನಗರಗಳಲ್ಲಿ ಈ ಸೆಂಟರ್‌ನ್ನು ಪೊಲೀಸ್ ಇಲಾಖೆ ಅಳವಡಿಸಿದ್ದರೂ ಕೂಡ ಮಂಗಳೂರಿನಲ್ಲಿ ಇದೇ ಪ್ರಥಮ ಬಾರಿಗೆ ತೆರೆಯಲಾಗಿದೆ. ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಸುಮಾರು 75 ಕಡೆ ಹೊಸ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಟ್ರಾಫಿಕ್ ನಿಯಮ ಉಲ್ಲಂಘನೆ ಸಹಿತ ಅಪರಾಧ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಇದು ಸಹಕಾರಿಯಾಗಿದೆ. ಅಂದರೆ, ಸಂಚಾರ ನಿಯಮ ಉಲ್ಲಂಘಿಸಿದರೆ, ಅಪರಾಧ ಚಟುವಟಿಕೆ ನಡೆದರೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನು ಪರಿಶೀಲನೆ ನಡೆಸಲಾಗುತ್ತದೆ. ಅದರಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಇದರಿಂದ ಸಾಧ್ಯವಾಗುತ್ತದೆ.
ಇವೆಲ್ಲವನ್ನೂ ಕದ್ರಿ ಠಾಣೆಯಲ್ಲಿ ತೆರೆಯಲಾದ ಈ ಸೆಂಟರ್‌ನಲ್ಲಿ ನಿಯಂತ್ರಿಸಲಾಗುತ್ತದೆ. ಇದಕ್ಕಾಗಿ ನುರಿತ ಸಿಬ್ಬಂದಿ ವರ್ಗವನ್ನೂ ನೇಮಿಸಲಾಗಿದೆ. ಪೊಲೀಸ್ ಇಲಾಖೆಯು ಆರ್‌ಟಿಒ ಜೊತೆ ಈಗಾಗಲೆ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಸಂಚಾರ ನಿಯಮ ಉಲ್ಲಂಘಿಸಿದ ಚಾಲಕರ ವಿವರವನ್ನು ತಕ್ಷಣ ಪತ್ತೆ ಹಚ್ಚಲಾಗುತ್ತದೆ.
ಹಿಂದೆ ಸಂಚಾರ ನಿಯಮ ಉಲ್ಲಂಘಿಸಿದರೆ ಅಂತಹವರ ವಿಳಾಸ ಪತ್ತೆ ಹಚ್ಚಿ ನೋಟಿಸ್ ನೀಡಲಾಗುತ್ತಿತ್ತು. ಆದರೆ, ಈ ಪ್ರಕ್ರಿಯೆಯಲ್ಲಿ ಭಾರೀ ವಿಳಂಬವಾಗುತ್ತಿತ್ತು. ಅಲ್ಲದೆ ಕೆಲವೊಮ್ಮೆ ಆ ವಿಳಾಸದಲ್ಲಿ ಯಾರೂ ಇರದಿದ್ದರೆ ಅಂತಹವರನ್ನು ಪತ್ತೆ ಹಚ್ಚುವುದು ಸಾಹಸವಾಗುತ್ತಿತ್ತು. ಅದಲ್ಲದೆ ದಂಡ ಕಟ್ಟುವಾಗ ಕೆಲವೊಂದು ಕಾರಣದಿಂದ ವಿಳಂಬವೂ ಆಗುತ್ತದೆ. ಇದನ್ನು ತಪ್ಪಿಸಲು ಮತ್ತು ಕಾನೂನು ಉಲ್ಲಂಘಿಸಿದ ತಕ್ಷಣ ವಿಳಾಸ ಪತ್ತೆ ಹಚ್ಚಿ ಕ್ಷಣಾರ್ಧದಲ್ಲಿ ತಪ್ಪಿತಸ್ಥರಿಗೆ ದಂಡ ಪಾವತಿಯ ನೋಟಿಸ್ ರವಾನೆ ಮಾಡಲು ಈ ಸೆಂಟರ್ ಸಹಕಾರಿಯಾಗಲಿದೆ.
ನೋಟಿಸ್ ಸ್ವೀಕರಿಸಿದ ಸವಾರರು ಆಯುಕ್ತಾಲಯ ವ್ಯಾಪ್ತಿಯ ಯಾವುದೇ ಸಂಚಾರ ಠಾಣೆಯಲ್ಲಿ ದಂಡ ಪಾವತಿಸಬಹುದು. ಒಂದೊಮ್ಮೆ ದಂಡ ಪಾವತಿಸದಿದ್ದರೆ ಇನ್ನೊಮ್ಮೆ ಸಿಕ್ಕಿ ಬಿದ್ದಾಗ ಹಳೆಯ ದಂಡ ಪಾವತಿ ಬಾಕಿ ಇರುವುದನ್ನೂ ಕೂಡ ಇವು ಸೂಚಿಸುತ್ತದೆ. ಒಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಮಂಗಳೂರು ನಗರ ಪೊಲೀಸ್ ಹೊಂದಿಕೊಳ್ಳುತ್ತಿದ್ದು, ಸಾರ್ವಜನಿಕರಿಗೆ ಮತ್ತಷ್ಟು ಜನಸ್ನೇಹಿಯಾಗಲು ಪ್ರಯತ್ನಿಸುತ್ತಿದೆ.