ಮಣಿಪಾಲ ವಿವಿಯಲ್ಲಿ ನಾಳೆ ಯೋಗ ದಿನಾಚರಣೆ

ಉಡುಪಿ, ಜೂ.20: ಮಣಿಪಾಲ ವಿವಿಯು, ಯೋಗ ವಿಭಾಗ ಹಾಗೂ ಎಂಐಟಿ ಮಣಿಪಾಲ ಇವುಗಳ ಸಹಯೋಗದೊಂದಿಗೆ ಪ್ರಾಧ್ಯಾಪಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಾಳೆ ಬೆಳಗ್ಗೆ 8:00ರಿಂದ 9:00ಗಂಟೆಯವರೆಗೆ ಎಂಐಟಿಯ ಫುಡ್‌ಕೋರ್ಟ್‌ನಲ್ಲಿ ಆಯೋಜಿಸಿದೆ.
ವಿವಿಯ ಯೋಗ ವಿಭಾಗವು ಈಗಾಗಲೇ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಯೋಗದ ಕುರಿತು ಪ್ರಬಂಧ ಸ್ಪರ್ಧೆ, ಪೋಸ್ಟರ್ ಸ್ಪರ್ಧೆ ಹಾಗೂ ಆಸನ ಸ್ಪರ್ಧೆಗಳನ್ನು ಆಯೋಜಿಸಿದೆ. ನಾಳೆ ನಡೆಯುವ ಸಮಾರಂಭದಲ್ಲಿ ಪ್ರತಿ ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದವರಿಗೆ ಬಹುಮಾನಗಳನ್ನು ವಿತರಿಸಲಾಗುವುದು.
ಕಳೆದ ಜೂ.10ರಿಂದಲೇ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರಿಗೆ ಯೋಗ ತರಬೇತಿಯನ್ನು ಆಯೋಜಿಸಲಾಗಿತ್ತು.
ನಾಳೆ ಯೋಗ ಪ್ರದರ್ಶನದ ಬಳಿಕ ನಡೆಯುವ ಸಮಾರಂಭದಲ್ಲಿ ಮಣಿಪಾಲ ವಿವಿ ಯೋಗ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಕೆ.ಕೃಷ್ಣ ಭಟ್ ಮುಖ್ಯ ಅತಿಥಿಯಾಗಿದ್ದು ಬಹುಮಾನಗಳನ್ನು ವಿತರಿಸುವರು. ಎಂ.ಎಸ್ಸಿ ಯೋಗ ಥೆರಪಿ ವಿಭಾಗದ ವಿದ್ಯಾರ್ಥಿಗಳಿಗೆ ಯೋಗಾಸನಗಳ ಪ್ರದರ್ಶನ ನಡೆಯಲಿದೆ ಎಂದು ವಿಭಾಗದ ಮುಖ್ಯಸ್ಥೆ ಡಾ.ಅನ್ನಪೂರ್ಣ ಕೆ. ತಿಳಿಸಿದ್ದಾರೆ.
ಮುನಿಯೋಗ: ಮುನಿಯಾಲು ಆಯುರ್ವೇದ ಸಂಸ್ಥೆ ಅಭಿವೃದ್ಧಿ ಪಡಿಸಿರುವ ‘ಮುನಿಯೋಗ’ ಹಲವು ಉಪಯುಕ್ತ ಜೀವನಕ್ರಮಗಳ ಸಂಯೋಜನೆ ಯಾಗಿದ್ದು, ದಿನಚರ್ಯ, ಋತುಚರ್ಯ, ಆಚಾರ, ವಿಚಾರ, ಆಹಾರ, ಆಯ್ದ ಯೋಗಾಸನಗಳು, ಕಪಾಲಭಾತಿ, ಪ್ರಾಣಾಯಾಮ, ಬೌದ್ಧಧ್ಯಾನ ಪದ್ಧತಿಗಳಾದ ನಡಿಗೆಯಧ್ಯಾನ, ಆನಾಪಾನ ಹಾಗೂ ವಿಪಸ್ಸನ, ಧ್ಯಾನದ ಸಂದರ್ಭದಲ್ಲಿ ತೊಡಕಾಗಿ ಬರುವ ಆಲೋಚನೆಗಳನ್ನು ನಿಯಂತ್ರಿಸುವ ರಕ್ಷಣಾಮಂತ್ರಗಳನ್ನು ಒಳಗೊಂಡಿವೆ.
ಆಸಕ್ತರು ಅಂತಾರಾಷ್ಟ್ರೀಯ ಯೋಗದಿನವಾದ ನಾಳೆ ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ಬೆಳಗ್ಗೆ 10ರಿಂದ ಅಪರಾಹ್ನ ಒಂದು ಗಂಟೆವರೆಗೆ ನಡೆಯುವ ಮುನಿಯೋಗದ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಳ್ಳ ಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. ಆಸಕ್ತರು ದೂರವಾಣಿ ಸಂಖ್ಯೆ: 1804253178ನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.







