ಪಾಕ್ ಸಂಭ್ರಮಾಚರಣೆಗೆ ಬಾಲಕ ಬಲಿ

ಕರಾಚಿ, ಜೂ.20: ಪಾಕಿಸ್ತಾನ ತಂಡ ಭಾರತವನ್ನು ಮಣಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ್ದಕ್ಕೆ ದೇಶಾದ್ಯಂತ ಸಂಭ್ರಮದ ವಾತಾವರಣ ಕಂಡುಬಂದಿದೆ. ಆದರೆ, ಈ ಸಂಭ್ರಮಾಚರಣೆಯ ವೇಳೆ ಓರ್ವ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ.
15 ವರ್ಷದ ಬಾಲಕ ಸೈಯದ್ ಹುಸೈನ್ ತನ್ನ ಮನೆಯ ಬಾಲ್ಕನಿಯ ಹೊರಗೆ ನಿಂತು ಪಾಕ್ ಗೆದ್ದ ಸಂಭ್ರಮದಲ್ಲಿ ಅಭಿಮಾನಿಗಳು ಸಿಡಿಸುತ್ತಿದ್ದ ಸುಡುಮದ್ದುಗಳನ್ನು ವೀಕ್ಷಿಸುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಗನ್ ಹಿಡಿದು ಆಕಾಶದತ್ತ ಫೈರಿಂಗ್ ನಡೆಸಿದ್ದಾಗ ಸಿಡಿದ ಬುಲೆಟ್‌ವೊಂದು ಬಾಲ್ಕನಿಯಲ್ಲಿ ನಿಂತಿದ್ದ ಬಾಲಕನಿಗೆ ತಗಲಿದೆ. ತಕ್ಷಣವೇ ಬಾಲಕನನ್ನು ಜಿನ್ನಾ ಪೋಸ್ಟ್ ಗ್ರಾಜುವೇಟ್ ಮೆಡಿಕಲ್ ಸೆಂಟರ್‌ಗೆ ಸೇರಿಸಿ ತುರ್ತು ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ.
ಸಂಭ್ರಮಾಚರಣೆಯ ವೇಳೆ ಆಕಾಶದಲ್ಲಿ ನಡೆಸಿರುವ ಫೈರಿಂಗ್‌ಗೆ ಕರಾಚಿಯಲ್ಲಿ ಹಲವು ಮಂದಿ ಗಾಯಗೊಂಡಿರುವುದಾಗಿ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ವ್ಯಕ್ತಿಯೊಬ್ಬ ಗನ್ ಹಿಡಿದು ಗುಂಡುಹಾರಿಸುತ್ತಿದ್ದಾನೆಂದು ನನ್ನ ಮಗ ನನ್ನನ್ನು ಕರೆದು ಹೇಳಿದ್ದ. ನಾನು ಆತನ ಬಳಿ ಮನೆಯೊಳಗೆ ಬರುವಂತೆ ಹೇಳಿದ್ದೆ. ಪಪ್ಪಾ, ನನಗೆ ಗುಂಡು ತಾಗಿತು ಎಂದು ಆತ ಚೀರಾಡಿದ್ದ ಎಂದು ಮೃತ ಬಾಲಕನ ತಂದೆ ಘಟನೆಯ ಬಗ್ಗೆ ವಿವರಿಸಿದ್ದಾರೆ.





