ಎಸ್ಪಿಯನ್ನು ಕರೆಸಿ ಸೂಚನೆ ನೀಡಿದ್ದರಲ್ಲಿ ತಪ್ಪೇನಿಲ್ಲ: ಶಶಿಧರ ಹೆಗ್ಡೆ

ಮಂಗಳೂರು, ಜೂ.21: ಕಲ್ಲಡ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಎಸ್ಪಿಯನ್ನು ಕರೆಸಿ ಸಚಿವ ರಮಾನಾಥ ರೈ ನೀಡಿದ ಸೂಚನೆಯಲ್ಲಿ ತಪ್ಪೇನಿರಲಿಲ್ಲ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ರೈ ತನ್ನ ಅಧಿಕಾರದ ಮಿತಿಯೊಳಗೆ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದಾರೆ. ಆ ಬಗ್ಗೆ ಬಿಜೆಪಿ-ಸಂಘಪರಿವಾರ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಮನಪಾ ಸಚೇತಕ ಶಶಿಧರ ಹೆಗ್ಡೆ ಹೇಳಿದರು.
ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 6 ಬಾರಿ ಶಾಸಕರಾಗಿ, 2 ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿರುವ ರಮಾನಾಥ ರೈಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದನ್ನು ಸಹಿಸದ ಬಿಜೆಪಿ- ಸಂಘಪರಿವಾರವು ತೇಜೋವಧೆಗೆ ಮುಂದಾಗಿದೆ. ಕೋಮುಗಲಭೆ ಸೃಷ್ಟಿಸಿ ಲಾಭ ಪಡೆಯುವ ಆವಶ್ಯಕತೆ ಕಾಂಗ್ರೆಸ್‌ಗೆ ಇಲ್ಲ. ಅದೇನಿದ್ದರೂ ಬಿಜೆಪಿಗರ ಚಾಳಿಯಾಗಿದೆ ಎಂದರು.
ಕಲ್ಲಡ್ಕ ಪ್ರಭಾಕರ ಭಟ್ ಉದ್ರೇಕಕಾರಿ ಭಾಷಣ ಮಾಡಿದುದರಿಂದಲೇ ಜಿಲ್ಲೆಯ ಅಲ್ಲಲ್ಲಿ ಅಶಾಂತಿ ಕದಡುತ್ತಿದೆ. ಅನೇಕ ಅಮಾಯಕ ಯುವಕರ ಬಾಳನ್ನು ಅವರು ಹಾಳು ಮಾಡಿದ್ದಾರೆ. ಬಂಡವಾಳ ಹೂಡಿಕೆದಾರರು ಕೂಡ ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಶಶಿಧರ ಹೆಗ್ಡೆ ನುಡಿದರು.
ಶಾಲೆಟ್ ಪಿಂಟೋ ಅವಹೇಳನಕ್ಕೆ ಖಂಡನೆ: ಸಚಿವ ರಮಾನಾಥ ರೈಯನ್ನು ಸಮರ್ಥಿಸಿ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿರುವುದನ್ನು ಸಹಿಸಲಾಗದ ಕೆಲವರು ಅವರ ಅವಹೇಳನದಲ್ಲಿ ತೊಡಗಿದ್ದಾರೆ. ಇದು ಖಂಡನೀಯ ಎಂದು ಶಶಿಧರ ಹೆಗ್ಡೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಟರ್‌ಗಳಾದ ಡಿ.ಕೆ.ಅಶೋಕ್, ಎ.ಸಿ.ವಿನಯರಾಜ್, ಭಾಸ್ಕರ ಮೊಯ್ಲಿ, ನವೀನ್ ಡಿಸೋಜ, ರಾಧಾಕೃಷ್ಣ, ಪಕ್ಷದ ಮುಖಂಡರಾದ ನಾಗೇಶ್, ಟಿ.ಕೆ.ಸುಧೀರ್, ಸಂತೋಷ್ ಶೆಟ್ಟಿ, ನಝೀರ್ ಬಜಾಲ್ ಉಪಸ್ಥಿತರಿದ್ದರು.







