ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ಯೋಗ ಅತ್ಯವಶ್ಯಕ: ವೈ.ಕೆ.ತಿಮ್ಮೇಗೌಡ
.jpg)
ಹನೂರು, ಜೂ.21: ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗ ಅತ್ಯವಶ್ಯಕವಾಗಿದ್ದು, ಪ್ರತಿನಿತ್ಯ ಕೆಲಕಾಲ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು ಮತ್ತು ಯೋಗದ ಮಹತ್ವವನ್ನು ಇತರರಿಗೂ ತಿಳಿಸಿಕೊಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ತಿಳಿಸಿದರು.
ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ಹಾಗೂ ಇನ್ನಿತರ ಸಂಘಸಂಸ್ಥೆಗಳ ನೇತೃತ್ವದಲ್ಲಿ ವಿಶ್ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಬಿಇಒ ವೈ.ಕೆ. ತಿಮ್ಮೇಗೌಡ ಮಾತನಾಡಿ, ದೇಹ ಮತ್ತು ಮನಸ್ಸು ಆರೋಗ್ಯದಿಂದ ಕೂಡಿರಬೇಕಾದರೆ ಯೋಗ ಮಹತ್ವದ ಪಾತ್ರವನ್ನು ವಹಿಸಿದೆ. ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿಸುವುದಲ್ಲದೇ ವ್ಯಕ್ತಿಯಲ್ಲಿ ಚಿಂತನಾಶಕ್ತಿ, ಬೌದ್ಧಿಕ ಶಕಿ, ಭಾವನಾತ್ಮಕ ಶಕ್ತಿ ಸದೃಢಗೊಳ್ಳುತ್ತದೆ. ಜತೆಗೆ ಸಂವೇಗಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಮೂಲಕ ದೇಹ ಮತ್ತು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಇದರಿಂದ ರೋಗಮುಕ್ತ ಜೀವನ ನಡೆಸಲು ಸಾಧ್ಯ. ಹೆಚ್ಚಿನ ಭೌತಿಕ ಸಂಪತ್ತು ಹೊಂದಿದ ಮಾತ್ರಕ್ಕೆ ಯಾವುದೇ ರಾಷ್ಟ್ರ ಸಮೃದ್ಧಿಯಿಂದ ಕೂಡಿರಲು ಸಾಧ್ಯವಿಲ್ಲ. ಬದಲಾಗಿ ಆ ರಾಷ್ಟ್ರದ ಮಾನವ ಸಂಪನ್ಮೂಲ ಸೃಧಡತೆಯಿಂದ ಕೂಡಿರಬೇಕು. ಆರೋಗ್ಯದ ಸೂಚ್ಯಂಕವನ್ನು ಮಾಪನ ಮಾಡುವ ದೇಶದ ಅಭಿವೃದ್ಧಿಯನ್ನು ನಿರ್ಧರಿಸಲಾಗುತ್ತದೆ. ಆದುದರಿಂದ ಪ್ರತಿಯೊಬ್ಬರೂ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ತಿಳಿಸಿದರು.
2,000 ವಿದ್ಯಾರ್ಥಿಗಳು ಭಾಗಿ:
ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿದ್ಧ ಯೋಗ ಪ್ರದರ್ಶನದಲ್ಲಿ ಪಟ್ಟಣದ ಜಿವಿ ಗೌಡ ಸರ್ಕಾರಿ ಶಾಲೆ, ವಿವೇಕಾನಂದ ಶಾಲೆ, ಗೌತಮ್ ಶಾಲೆ, ಕ್ರಿಸ್ತರಾಜ ಶಾಲೆ, ಮೊರಾರ್ಜಿ ದೇಸಾಯಿ ಶಾಲೆ, ಏಕಲವ್ಯ ವಸತಿ ಶಾಲೆ ಹಾಗೂ ಇನ್ನಿತರ ಶಾಲೆಗಳಿಂದ ಸುಮಾರು 2000ಕ್ಕೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬೆಳಗ್ಗೆ 7ರಿಂದ 8.30ರವರೆಗೆ ಯೋಗ ಪ್ರದರ್ಶನವು ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಮಮತಾ ಮಹದೇವು, ಮುಖ್ಯಾಧಿಕಾರಿ ಮೋಹನ್‌ಕೃಷ್ಣ, ಸದಸ್ಯ ಬಾಲರಾಜನಾಯ್ಡು, ತಾಪಂ ಇಒ ದರ್ಶನ್, ಉಪ ತಹಶೀಲ್ದಾರ್ ಭೈರಯ್ಯ, ದೈಹಿಕ ಶಿಕ್ಷಣ ಸಂಯೋಜಕ ತೇಜ್‌ಪಾಲ್, ಬಿಆರ್‌ಪಿ ಶ್ರೀನಿವಾಸನಾಯ್ಡು, ಗೌತಮ್ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ, ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಹಾಗೂ ವಿವಿಧ ಶಾಲೆಯ ಶಿಕ್ಷಕರು ಇದ್ದರು.







