ಕಲಾಯಿ ಅಶ್ರಫ್ ಹತ್ಯೆಗೆ ವ್ಯಾಪಕ ಖಂಡನೆ
ಮುಸ್ಲಿಂ ಸೆಂಟ್ರಲ್ ಕಮಿಟಿ
ಮಂಗಳೂರು, ಜೂ.21: ಬೆಂಜನಪದವಿನಲ್ಲಿ ಅಶ್ರಫ್ ಕಲಾಯಿಯವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದುದನ್ನು ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಖಂಡಿಸಿದೆ.
ತಕ್ಷಣ ಅಪರಾಧಿಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರಗಿಸಬೇಕು ಎಂದು ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಒತ್ತಾಯಿಸಿದ್ದಾರೆ.
ಮಂಗಳೂರು ಸೆಂಟ್ರಲ್ ಕಮಿಟಿ
ಎಸ್‌ಡಿಪಿಐ ಅಮ್ಮುಂಜೆ ವಲಯ ಅಧ್ಯಕ್ಷ ಅಶ್ರಫ್ ಕಲಾಯಿ ಅವರನ್ನು ದುಷ್ಕರ್ಮಿಗಳು ಹತ್ಯೆಗೈದುದನ್ನು ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್ ಖಂಡಿಸಿದ್ದಾರೆ.
ಕಳೆದೊಂದು ತಿಂಗಳಿನಿಂದ ಕಲ್ಲಡ್ಕ ಸಹಿತ ಹಲವು ಕಡೆ ಅಶಾಂತಿಯ ವಾತಾವರಣವಿದ್ದರೂ ಕೂಡ ಜಿಲ್ಲಾಡಳಿತ ಮತ್ತು ಜಿಲ್ಲೆಯ ಪೊಲೀಸ್ ಇಲಾಖೆಯು ಮುಂಜಾಗರೂಕತಾ ಕ್ರಮ ಕೈಗೊಂಡಿದ್ದರೆ ಅಮಾಯಕ ಯುವಕನ ಕೊಲೆಯನ್ನು ತಪ್ಪಿಸಬಹುದಿತ್ತು. ರಾಜಕೀಯ ಪಕ್ಷದ ಮುಖಂಡರು ಪರ-ವಿರೋಧದ ಹೇಳಿಕೆಗಳಲ್ಲಿ ಕಾಲ ಕಳೆದರೇ ವಿನಹ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಇನ್ನೇನೋ ಈತುಲ್ ಫಿತ್‌ರ್‌ನ ಸಂಭ್ರಮದಲ್ಲಿರುವಾಗಲೇ ಈ ಘಟನೆಯು ಮುಸ್ಲಿಮರನ್ನು ಆತಂಕಕ್ಕೀಡು ಮಾಡಿದೆ. ಹಾಗಾಗಿ ಹಬ್ಬದ ಆಚರಣೆಗೆ ಸೂಕ್ತ ಭದ್ರತೆ ನೀಡಿ ಶಾಂತಿಭಂಗ ಮಾಡುವವರನ್ನು ಮುಚ್ಚಳಿಕೆ ಬರೆಸಿಕೊಳ್ಳಬೇಕು ಎಂದು ಅಲಿ ಹಸನ್ ಒತ್ತಾಯಿಸಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ ಎಸ್‌ಡಿಪಿಐ ಅಮ್ಮುಂಜೆ ವಲಯಾಧ್ಯಕ್ಷ ಅಶ್ರಫ್ ಕಲಾಯಿಯ ಹತ್ಯೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ತೀವ್ರವಾಗಿ ಖಂಡಿಸಿದೆ. ಜಿಲ್ಲೆಯಲ್ಲಿ ಈಗಾಗಲೇ ಅಭದ್ರತೆಯ ವಾತಾವರಣವಿದ್ದು, ಈ ಘಟನೆಯು ಜಿಲ್ಲೆಯನ್ನು ಇನ್ನಷ್ಟು ಆತಂಕಕ್ಕೆ ದೂಡುವ ಸಾಧ್ಯತೆ ಇದೆ. ಆದ್ದರಿಂದ ಪೊಲೀಸ್ ಇಲಾಖೆಯು ಶೀಘ್ರವಾಗಿ ಹಂತಕರನ್ನು ಪತ್ತೆ ಹಚ್ಚುವ ಮೂಲಕ ಇನ್ನಷ್ಟು ಅನಾಹುತವಾಗದಂತೆ ನೋಡಿಕೊಳ್ಳಬೇಕಿದೆ. ಈದ್ ಆಚರಿಸಲು ಮುಸ್ಲಿಮರು ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ನಡೆದಿರುವ ಹತ್ಯೆಯು ಮುಸ್ಲಿಮರಲ್ಲಿ ಸಹಜವಾಗಿಯೇ ಆತಂಕವನ್ನು ಹುಟ್ಟು ಹಾಕಿದೆ. ಈ ಹಿನ್ನೆಲೆಯಲ್ಲಿ ಸರಕಾರ ಮತ್ತು ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಂಡು ಶಾಂತಿ ಕಾಪಾಡಬೇಕು ಮತ್ತು ಮೃತ ಅಶ್ರಫ್ ಕುಟುಂಬಕ್ಕೆ ಪರಿಹಾರ ಧನ ಒದಗಿಸಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಅಧ್ಯಕ್ಷ ಮುಹಮ್ಮದ್ ಕುಂಞಿ ಒತ್ತಾಯಿಸಿದ್ದಾರೆ.
ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ
ಮಲ್ಲೂರು ಸಮೀಪದ ಕಲಾಯಿಯ ಅಶ್ರಫ್‌ರನ್ನು ದುಷ್ಕರ್ಮಿಗಳು ಕೋಮು ದ್ವೇಷದಿಂದ ಹತ್ಯೆ ನಡೆಸಿರುವುದು ಖಂಡನೀಯ. ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿದ್ದ ಅಶ್ರಫ್ ಪ್ರವೃತ್ತಿಯಲ್ಲಿ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಲ್ಪಟ್ಟಿದ್ದರು. ಇಂತಹ ಅಮಾಯಕ ಅಶ್ರಫ್‌ರನ್ನು ಗುರಿಯಾಗಿಸಿಕೊಂಡು ನಡೆಸಿದ ಕೃತ್ಯ ಅಕ್ಷಮ್ಯ. ತಕ್ಷಣ ಜಿಲ್ಲಾ ಪೊಲೀಸ್ ಇಲಾಖೆ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್, ಸದಸ್ಯರಾದ ಕೆ. ಹಮೀದ್ ಕುದ್ರೋಳಿ, ಮುಹಮ್ಮದ್ ಹನೀಫ್ ಯು., ಸುಹೈಲ್ ಕಂದಕ್, ಅಶ್ರಫ್ ಕಿನಾರಾ, ನೌಶಾದ್ ಬಂದರ್ ಒತ್ತಾಯಿಸಿದ್ದಾರೆ.







