ಆರೋಗ್ಯಯುತ ಜೀವನಕ್ಕೆ ಯೋಗ: ಡಾ.ಮೂಡಿತ್ತಾಯ

ಉಳ್ಳಾಲ, ಜೂ.21: ಸಂತೋಷದಾಯಕ ಮತ್ತು ಆರೋಗ್ಯಯುತ ಜೀವನಕ್ಕಾಗಿ ದಿನನಿತ್ಯ ಯೋಗಾಭ್ಯಾಸ ನಡೆಸುವ ಅವಶ್ಯಕತೆ ಇದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಎಂ.ಎಸ್ ಮೂಡಿತ್ತಾಯ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ವಿಶ್ವವಿದ್ಯಾನಿಲಯದ ವತಿಯಿಂದ ದೇರಳಕಟ್ಟೆಯ ಕ್ಷೇಮ ಕಾಲೇಜಿನಲ್ಲಿ ಜರಗಿದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸರಿಯಾದ ದೃಷ್ಟಿಕೋನ ಹಾಗೂ ಬದ್ಧತೆಯನ್ನು ಇಟ್ಟುಕೊಂಡು ನಿರಂತರ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಿ. ಜೀವನದ ಸತ್ಯವೊಂದೇ ಸಾವು. ಅದರ ನಡುವಿನ ಜೀವನದ ವಿಶ್ಲೇಷಣೆ ಅತಿ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇಮ ಡೀನ್ ಡಾ.ಸತೀಶ್ ಭಂಡಾರಿ ವಹಿಸಿ ಮಾತನಾಡಿ ಕ್ಷೇಮ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಹಿರೇಮಠ್ ಮುಖ್ಯ ಅತಿಥಿಯಾಗಿದ್ದರು.
ಡಾ.ರಶ್ಮಿತಾ ಶೆಟ್ಟಿ ಮತ್ತು ಸೀಮಾ ಕಾಡೋಸಾ ಯೋಗ ತರಬೇತಿ ನೀಡಿದರು. ನಿಟ್ಟೆ ಫಿಸಿಯೋಥೆರಪಿ ವಿಭಾಗದ ಪ್ರಾಂಶುಪಾಲ ಡಾ.ಧನೇಶ್ ಕುಮಾರ್ ಕೆ ಸ್ವಾಗತಿಸಿದರು. ಕಿರಣ್ ಕಾರ್ಯಕ್ರಮ ನಿರ್ವಹಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕಿ ಡಾ.ಸುಮಲತಾ ಆರ್. ಶೆಟ್ಟಿ ವಂದಿಸಿದರು.
ಇದೇ ಸಂದರ್ಭ ನಿಟ್ಟೆ ವಿ.ವಿ ವೈದ್ಯರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಿಂದ ಯೋಗಾಭ್ಯಾಸ ನಡೆಯಿತು.