ಮಾನಸಿಕ, ದೈಹಿಕ ಆರೋಗ್ಯ ಸಮತೋಲನದಲ್ಲಿಡಲು ಯೋಗ ಸುಲಭ ವಿಧಾನ: ಡಾ. ಕೆ. ಎನ್. ಶೆಣೈ

ಬೆಳ್ತಂಗಡಿ, ಜೂ.21: ಭಾರತ ವಿಶ್ವಕ್ಕೆ ಕೊಟ್ಟಿರುವ ಅತ್ಯಂತ ದೊಡ್ಡ ಉಡುಗೊರೆ ಯೋಗ. ಇದೀಗ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನಾಚರಣೆ ಆಚರಿಸಲ್ಪಡುತ್ತಿರುವುದು ಯೋಗಕ್ಕೆ ಸಿಕ್ಕ ಮನ್ನಣೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಎರಡನ್ನೂ ಸಮತೋಲನದಲ್ಲಿಡಲು ಯೋಗಕ್ಕಿಂತ ಸುಲಭ ವಿಧಾನ ಮತ್ತೊಂದಿಲ್ಲ ಎಂದು ಉಜಿರೆಯ ಖ್ಯಾತ ವೈದ್ಯ ಡಾ. ಕೆ. ಎನ್. ಶೆಣೈ ಅಭಿಪ್ರಾಯಪಟ್ಟರು.
ಅವರು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಜೂನ್ 21 ರಂದು ನಡೆದ ವಿಶ್ವಯೋಗ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಋಷಿ-ಮುನಿಗಳಿಂದ ಬಳುವಳಿಯಾಗಿ ಬಂದಿರುವ ಯೋಗ ಇಂದಿಗೂ ಪ್ರಸ್ತುತ. ಪ್ರತಿದಿನ ಯೋಗಾಭ್ಯಾಸ ಮಾಡುವ ವ್ಯಕ್ತಿಯ ಮನಸ್ಸು ಮತ್ತು ಶರೀರ ಎರಡೂ ರೋಗಮುಕ್ತವಾಗಿರುತ್ತವೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಯೋಗ ಮಾಡುವವರು ಯೋಗಿಗಳಂತೆ ನಿರೋಗಿಗಳಾಗುತ್ತಾರೆ. ಆರೋಗ್ಯ ಸುಧಾರಣೆಗೂ ಯೋಗ ಅತ್ಯುತ್ತಮ ಮಾರ್ಗ ಎಂದರು.
ಈ ವೇಳೆ ಕಾರ್ಯಕ್ರಮದ ಸಂಯೋಜಕ ಹಾಗೂ ಯೋಗ ಗುರುಗಳಾದ ಡಾ. ಶ್ರೀಧರ್ ಭಟ್ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ನಂತರ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನಡೆಸಿಕೊಟ್ಟರು. ಕಾರ್ಯಕ್ರಮ ಸಂಯೋಜಕ ಕ್ಯಾ ಜಿ. ಆರ್ ಭಟ್ ಉಪಸ್ಥಿತರಿದ್ದರು.







