ರೆಡ್‌ಕ್ರಾಸ್‌ನಿಂದ ವಿಶ್ವ ಯೋಗ ದಿನಾಚರಣೆ

ಉಡುಪಿ, ಜೂ.21: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ಇಂದು ಬೆಳಗ್ಗೆ ಅಜ್ಜರಕಾಡಿನಲ್ಲಿರುವ ರೆಡ್‌ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್‌ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಂಬಲಪಾಡಿ ಜನಾರ್ಧನ ಮತ್ತು ಶ್ರೀಮಹಾಕಾಳಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳ್ ಭಾಗವಹಿಸಿದ್ದರು. ನಮ್ಮ ಜೀವನ ಶೈಲಿಯನ್ನು ರೂಪಿಸಲು ಯೋಗ ಅತ್ಯುತ್ತಮ ಸಾಧನ. ಯೋಗವನ್ನು ದಿನದ ಒಂದು ಗಂಟೆಗೆ ಸೀಮಿತಗೊಳಿಸದೇ ದಿನದ 24 ಗಂಟೆಗಳಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದವರು ಹೇಳಿದರು.
ಹಿಂದಿನಕಾಲದಲ್ಲಿ ಹಿರಿಯರು ಬೆಳಿಗ್ಗೆ ಎದ್ದು ಮಾಡುತ್ತಿದ್ದ ದೈನಂದಿನ ಕೆಲಸಗಳೆಲ್ಲವೂ ಅಕ್ಕಿ ರುಬ್ಬುವುದು, ನೀರು ಎಳೆಯುವುದು, ಮಜ್ಜಿಗೆ ಕಡೆಯುವುದು ಯೋಗಾಸನದ ವಿವಿಧ ರೂಪಗಳಾಗಿದ್ದವು. ಪ್ರಸ್ತುತ ಅವುಗಳ ಬದಲಿಗೆ ಯೋಗಾಭ್ಯಾಸ ಮಾಡಲಾಗುತ್ತಿದೆ ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆಯ ಬಸ್ರೂರು ರಾಜೀವ ಶೆಟ್ಟಿ ಗೌರವ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಗಳಲ್ಲಿ ಈಗಾಗಲೇ 9,65,000 ಯುವ ರೆಡ್‌ಕ್ರಾಸ್ ಮತ್ತು ಜೂನಿಯರ್ ರೆಡ್‌ಕ್ರಾಸ್ ಘಟಕದ ವಿದ್ಯಾರ್ಥಿಗಳು ನೊಂದಾಯಿಸಲ್ಪಟ್ಟಿದ್ದು, ಅವರೆಲ್ಲರಿಗೂ ದಿನದ ಒಂದೂವರೆ ಗಂಟೆ ಯೋಗಾಭ್ಯಾಸ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.







