ರೈತರ ಸಾಲ ಮನ್ನಾ ರಾಜ್ಯ ಸರಕಾರಗಳ ಹೊಣೆ: ಡಿ.ವಿ.ಸದಾನಂದಗೌಡ

ಬೆಂಗಳೂರು, ಜೂ.21: ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸುವ ಬದಲು ರಾಜ್ಯ ಸರಕಾರಗಳೇ ಅದರ ಹೆಚ್ಚು ಭಾರವನ್ನು ತೆಗೆದು ಕೊಳ್ಳಬೇಕು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆಗ್ರಹಿಸಿದ್ದಾರೆ.
ರೈತರ ಸಾಲ ಮನ್ನಾ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮವನ್ನು ಸ್ವಾಗತಿಸುತ್ತೇನೆ. ಇದಕ್ಕೆ ಮುನ್ನುಡಿ ಬರೆದವರೆ ನಾವು. ಉತ್ತರಪ್ರದೇಶದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲೆ ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಅವರು ಹೇಳಿದರು.
ಮಹಾರಾಷ್ಟ್ರದಲ್ಲಿ ಸಾಲ ಮನ್ನಾ ಮಾಡಿದ್ದೇವೆ. ಅದನ್ನೆ ಪಂಜಾಬ್ ಹಾಗೂ ಕರ್ನಾಟಕ ಸರಕಾರ ಅನುಕರಿಸಿದೆ. ಕಳೆದ ಒಂದೂವರೆ, ಎರಡು ತಿಂಗಳುಗಳಿಂದ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ನಾವು ಮಾಡಿದ ಹೋರಾಟಕ್ಕೆ ಬೆಲೆ ಸಿಕ್ಕಿದೆ ಎಂದು ಸದಾನಂದಗೌಡ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೀಟು ಸಿಕ್ಕಾಪಟ್ಟೆ ಬಿಸಿಯಾಗಿದೆ. ಆದುದರಿಂದ, ಎದ್ದುನಿಂತು ರೈತರ ಸಾಲ ಮನ್ನಾ ಮಾಡಿದ್ದಾರೆ. ಇಷ್ಟು ದಿನ ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಲಿ ಎಂದು ತಂಬೂರಿ ಬಾರಿಸುತ್ತಿದ್ದವರು. ಈಗ ಕೊನೆ ಕ್ಷಣದಲ್ಲಿ 50 ಸಾವಿರ ರೂ.ವರೆಗಿನ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಬೇರೆ ರಾಜ್ಯಗಳಲ್ಲಿ 1 ಲಕ್ಷ ರೂ.ವರೆಗೆ ರೈತರ ಸಾಲ ಮನ್ನಾ ಮಾಡಿದ್ದಾರೆ. ಉತ್ತರಪ್ರದೇಶದಲ್ಲಿ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 34 ಸಾವಿರ ಕೋಟಿ ರೂ., ಮಹಾರಾಷ್ಟ್ರದಲ್ಲಿ 35 ಸಾವಿರ ಕೋಟಿ ರೂ., ಪಂಜಾಬ್‌ನಲ್ಲಿ 2 ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿನ ಸತತ ಬರಗಾಲ, ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಆದುದರಿಂದ, ರಾಜ್ಯ ಸರಕಾರ ಸಾಲ ಮನ್ನಾ ಪ್ರಮಾಣವನ್ನು ಪುನರ್ ಪರಿಶೀಲನೆ ನಡೆಸಬೇಕು. ಸಹಕಾರಿ ಬ್ಯಾಂಕುಗಳ ಜೊತೆಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲವನ್ನು ಮನ್ನಾ ಮಾಡಲಿ ಎಂದು ಸದಾನಂದಗೌಡ ತಿಳಿಸಿದರು.
ರಾಜ್ಯಕ್ಕೆ ನೀಡಬೇಕಾದ ಅನುದಾನದಲ್ಲಿ ಕೇಂದ್ರ ಸರಕಾರ ಯಾವುದೆ ರೀತಿಯಲ್ಲಿ ಕಡಿತ ಮಾಡಿಲ್ಲ. ಬಂದ ಅನುದಾನವನ್ನು ರಾಜ್ಯ ಸರಕಾರ ಸದ್ಭಳಕೆ ಮಾಡಿಕೊಳ್ಳ ಬೇಕು. ಕೇಂದ್ರ ಸರಕಾರ ನೀಡುವ ಅನುದಾನದಲ್ಲಿ ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಬೇಕು ಎಂದು ಅವರು ಹೇಳಿದರು.
ಕೇಂದ್ರ ಸರಕಾರವು ರೈತರ ಪರವಾಗಿದೆ. 2022ರ ವೇಳೆಗೆ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆ ಹೊಂದಿದ್ದೇವೆ. ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ರೈತರಿಗೆ ಅತಿವೃಷ್ಟಿ, ಅನಾವೃಷ್ಟಿಯ ಮಾಹಿತಿ ಇರುವುದಿಲ್ಲ. ಅವರನ್ನು ಸಂಪೂರ್ಣ ಋಣ ಮುಕ್ತರನ್ನಾಗಿಸಬೇಕಿದೆ. ಆದುದರಿಂದ, ಸಾಲಮನ್ನಾ ಬಗ್ಗೆ ಪುನರ್ ಪರಿಶೀಲಿಸುವಂತೆ ರಾಜ್ಯ ಸರಕಾರಕ್ಕೆ ಆಗ್ರಹಿಸುತ್ತೇನೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಇನ್ನು ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲವೆಂದು ಸಿದ್ದರಾಮಯ್ಯಗೆ ಗೊತ್ತಿದೆ. ಆದುದರಿಂದ, ಕರಾವಳಿ, ಬಳ್ಳಾರಿ, ಕೃಷ್ಣೆ ಕಡೆಗೆ ಹೊರಟ್ಟಿದ್ದ ಅವರು, ಈ ಚುನಾವಣೆ ಬಳಿಕ ಮೈಸೂರು ಕಡೆಗೆ ತೆರಳುವುದು ನಿಶ್ಚಿತ ಎಂದು ಅವರು ತಿಳಿಸಿದರು.
ಉದ್ಯೋಗ ಮೇಳ: ಜೂ.24ರಂದು ನಗರದ ಎಟ್ರಿಯಾ ಎಂಜಿನಿಯರ್ ಕಾಲೇಜಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು, ಸುಮಾರು 80 ಕಂಪೆನಿಗಳು ಪಾಲ್ಗೊಳ್ಳುತ್ತಿವೆ. ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸದಾನಂದಗೌಡ ಮನವಿ ಮಾಡಿದರು.
ಎಲ್ಲ ಕಂಪೆನಿಗಳಿಗೆ ಕೌಂಟರ್ ತೆರೆಯುತ್ತೇವೆ. ಒಬ್ಬ ಅಭ್ಯರ್ಥಿ ಮೂರು ಕಂಪೆನಿಗಳಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಬೆಂಗಳೂರಿನ ಯುವಕರಿಗೆ ಇದು ಸಹಕಾರಿಯಾಗಲಿದೆ. ರೂಮನ್ ಟೆಕ್ನಾಲಜಿಯವರು ರಾಜ್ಯಾದ್ಯಂತ 40 ಕೇಂದ್ರಗಳಲ್ಲಿ ಯುವಕರಿಗೆ ಕೌಶಲ ತರಬೇತಿ ನೀಡುತ್ತಿದ್ದಾರೆ. ನಿರುದ್ಯೋಗ ಸಮಸ್ಯೆಯನ್ನು ನೀಗಿಸಲು ಈ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.







