ಬೇನಾಮಿ ಆಸ್ತಿ ಪ್ರಕರಣ : ಮೀಸ ಭಾರತಿಯ ವಿಚಾರಣೆ

ಹೊಸದಿಲ್ಲಿ, ಜೂ.21: 1,000 ಕೋಟಿ ರೂ.ಗೂ ಹೆಚ್ಚಿನ ಬೇನಾಮಿ ಆಸ್ತಿ ಹೊಂದಿದ್ದಾರೆ ಎನ್ನಲಾಗಿರುವ ಮೀಸ ಭಾರತಿ(ಲಾಲೂ ಪ್ರಸಾದ್ ಯಾದವ್ ಪುತ್ರಿ) ಅವರನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸುಮಾರು ಐದು ಗಂಟೆಗಳಷ್ಟು ಸುದೀರ್ಘ ವಿಚಾರಣೆ ನಡೆಸಿದರು.
ಈ ಹಿಂದೆ ಜೂನ್ 6 ಮತ್ತು 12ರಂದು ಐಟಿ ಇಲಾಖೆ ಹೊರಡಿಸಿದ್ದ ಸಮನ್ಸ್‌ಗೆ ಮೀಸ ಭಾರತಿ ಪ್ರತಿಕ್ರಿಯಿಸಿರಲಿಲ್ಲ. ಇವರ ಪತಿ ಶೈಲೇಶ್ ಕುಮಾರ್‌ಗೂ ಇಲಾಖೆ ಜೂನ್ 7 ಮತ್ತು 12ರಂದು ಸಮನ್ಸ್ ಹೊರಡಿಸಿದ್ದು ಅವರೂ ಪ್ರತಿಕ್ರಿಯೆ ನೀಡಿರಲಿಲ್ಲ. ಮಂಗಳವಾರ ಲಾಲೂ ಪುತ್ರಿ ಮೀಸ ಭಾರತಿ ಮತ್ತವರ ಪತಿ ಶೈಲೇಶ್ ಕುಮಾರ್, ಲಾಲೂ ಪತ್ನಿ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಪುತ್ರ ಹಾಗೂ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ , ಪುತ್ರಿಯರಾದ ಚಂದಾ ಮತ್ತು ರಾಗಿಣಿ ಯಾದವ್ ಅವರಿಗೆ ಸೇರಿದ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿತ್ತು.
ಮೀಸ ಭಾರತಿ ಮತ್ತಿತರರೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಚಾರ್ಟರ್ಡ್ ಅಕೌಂಟೆಂಟ್ ರಾಜೇಶ್ ಕುಮಾರ್ ಅಗರ್‌ವಾಲ್ ಎಂಬವರನ್ನು ಮೇ 22ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು.





