ವಿಧಾನಮಂಡಲ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಬೆಂಗಳೂರು, ಜೂ.21: ಬೆಂಗಳೂರಿನ ವಿಧಾನಸೌಧದಲ್ಲಿ ಜೂ.5 ರಿಂದ 21ರವರೆಗೆ ನಡೆದ ವಿಧಾನಮಂಡಲದ ಉಭಯ ಸದನಗಳ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಪ್ರಸಕ್ತ ವಿಧಾನಸಭೆ ಅಧಿವೇಶನವು ಜೂ.5 ರಿಂದ 21ರವರೆಗೆ ಒಟ್ಟು 13 ದಿನಗಳಲ್ಲಿ 68 ಗಂಟೆ 40 ನಿಮಿಷಗಳ ಕಾಲ ನಡೆದಿದ್ದು,ಜೂ.5ರಂದು ವಿವಿಧ ಇಲಾಖೆಗಳ ಬೇಡಿಕೆಗಳನ್ನು ಮಂಡಿಸಿ, 19ರವರೆಗೆ ಇಲಾಖಾ ಬೇಡಿಕೆಗಳ ಮೇಲೆ ಚರ್ಚೆ ನಡೆಸಲಾಗಿದೆ. ಇಲಾಖಾ ಬೇಡಿಕೆಗಳ ಮೇಲೆ 31 ಸದಸ್ಯರು 22 ಗಂಟೆ 34 ನಿಮಿಷಗಳ ಕಾಲ ಚರ್ಚೆಯಲ್ಲಿ ಭಾಗವಹಿಸಿದ್ದಾರೆ ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ಪ್ರಕಟಿಸಿದ್ದಾರೆ.
ಜೂ.21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಇಲಾಖಾ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರವನ್ನು ನೀಡಿದ ನಂತರ 2017-18ನೆ ಸಾಲಿನ ಅನುದಾನಗಳ ಬೇಡಿಕೆಗಳನ್ನು ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ ಎಂದು ಅವರು ಸದನದಲ್ಲಿ ತಿಳಿಸಿದರು.
ಸದನಕ್ಕೆ ಒಪ್ಪಿಸಿದ ವರದಿಗಳು: ಖಾಸಗಿ ಸದಸ್ಯರುಗಳ ವಿಧೇಯಕ ಹಾಗೂ ನಿರ್ಣಯಗಳ ಸಮಿತಿಯ 14ನೆ ಮತ್ತು 15ನೆ ವರದಿ, ಅರ್ಜಿಗಳ ಸಮಿತಿಯ 24ನೆ ವರದಿ, ಸರಕಾರಿ ಭರವಸೆಗಳ ಸಮಿತಿಯು ಎತ್ತಿನಹೊಳೆ ಯೋಜನೆ ಸ್ಥಳ ಪರಿವೀಕ್ಷಣೆಯ ವಿಶೇಷ ವರದಿ ಹಾಗೂ ಸಮಿತಿಯ 9ನೆ ವರದಿ.
ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಸಮಿತಿಯ 8ನೆ ವರದಿ, ಸಾರ್ವಜನಿಕ ಉದ್ದಿಮೆಗಳ ಸಮಿತಿಯ 132ನೆ ವರದಿ, ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ರಾಜ್ ಸಮಿತಿಯ 23ನೆ ವರದಿ, ಅಂದಾಜುಗಳ ಸಮಿತಿಯ 6ನೆ ವರದಿ, 14 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ.
ಅಧಿವೇಶನದಲ್ಲಿ 20 ವಾರ್ಷಿಕ ವರದಿಗಳು, 35 ಲೆಕ್ಕ ಪರಿಶೋಧನಾ ವರದಿಗಳು, ಒಂದು ಲೆಕ್ಕಪತ್ರ ವರದಿ, 3 ಲೆಕ್ಕ ಪರಿಶೋಧನಾ ವರದಿಗೆ ಅನುಪಾಲನಾ ವರದಿ ಸೇರಿದಂತೆ ಒಟ್ಟು 59 ಕಾಗದ ಪತ್ರಗಳನ್ನು ಮತ್ತು ಅಧೀನ ಶಾಸನ ರಚನಾ ಸಮಿತಿಯ ವತಿಯಿಂದ 8 ಅಧಿಸೂಚನೆಗಳನ್ನು ಮಂಡಿಸಲಾಗಿದೆ.
ನಿಯಮ 69ರಲ್ಲಿ 3 ನಿಲುವಳಿ ಸೂಚನೆಗಳ ಪರಿವರ್ತನೆಗೊಂಡ ಸೂಚನೆಗಳು ಸೇರಿದಂತೆ 26 ಸೂಚನೆಗಳನ್ನು ಸ್ವೀಕರಿಸಲಾಗಿದೆ. ಅವುಗಳಲ್ಲಿ 7 ಸೂಚನೆಗಳನ್ನು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ. 23 ವಿಷಯಗಳನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲಾಗಿದೆ.
ಈ ಅವಧಿಯಲ್ಲಿ ಒಟ್ಟು 1988 ಪ್ರಶ್ನೆಗಳ ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ 1883 ಪ್ರಶ್ನೆಗಳ ಸೂಚನೆಗಳನ್ನು ಅಂಗೀಕರಿಸಲಾಗಿದೆ. ಸದನದಲ್ಲಿ ಉತ್ತರಿಸುವ 150 ಪ್ರಶ್ನೆಗಳ ಪೈಕಿ 149 ಪ್ರಶ್ನೆಗಳಿಗೆ ಉತ್ತರಗಳನ್ನು ಹಾಗೂ ಲಿಖಿತ ಮೂಲಕ ಉತ್ತರಿಸುವ 1733 ಪ್ರಶ್ನೆಗಳ ಪೈಕಿ 1520 ಪ್ರಶ್ನೆಗಳಿಗೆ ಉತ್ತರಗಳನ್ನು ಸರಕಾರದಿಂದ ಸ್ವೀಕರಿಸಿ, ಸದನದಲ್ಲಿ ಮಂಡಿಸಲಾಗಿದೆ. 12 ಪ್ರಶ್ನೆಗಳ ಸೂಚನಾ ಪತ್ರಗಳು ತಿರಸ್ಕೃತಗೊಂಡಿವೆ. ಹಾಗೂ 93 ಪ್ರಶ್ನೆಗಳ ಸೂಚನಾ ಪತ್ರಗಳು ಹೆಚ್ಚುವರಿಯಾಗಿವೆ.
ನಿಯಮ 73ರಡಿಯಲ್ಲಿ 258 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 152 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. 57 ಸೂಚನೆಗಳ ಬಗ್ಗೆ ಸದನದಲ್ಲಿ ಚರ್ಚಿಸಲಾಗಿದ್ದು, ಉಳಿದ ಸೂಚನೆಗಳ ಉತ್ತರಗಳನ್ನು ಸದನದಲ್ಲಿ ಮಂಡಿಸಲಾಗಿದೆ. ನಿಯಮ 351ರಡಿಯಲ್ಲಿ ಒಟ್ಟು 129 ಸೂಚನೆಗಳು ಸ್ವೀಕೃತವಾಗಿದ್ದು, 124 ಸೂಚನೆಗಳು ಅಂಗೀಕೃತಗೊಂಡಿವೆ. ಮತ್ತು 75 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ.
ಪ್ರಸ್ತುತ ಅಧಿವೇಶನದಲ್ಲಿ ಜಿಎಸ್‌ಟಿ, ಕೆಎಸ್‌ಟಿ ಮತ್ತು ಧನ ವಿನಿಯೋಗ ವಿಧೇಯಕಗಳು ಸೇರಿದಂತೆ ಮಂಡಿಸಲಾದ 18 ವಿಧೇಯಕಗಳಲ್ಲಿ 17 ವಿಧೇಯಕಗಳು ಅಂಗೀಕೃತಗೊಂಡಿವೆ ಹಾಗೂ 2017ನೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ(ತಿದ್ದುಪಡಿ) ವಿಧೇಯಕವನ್ನು ಜಂಟಿ ಪರಿಶೀಲನಾ ಸಮಿತಿಗೆ ವಹಿಸಲಾಗಿದೆ.
ಭಾರತ ಸಂವಿಧಾನದ 151(2)ನೆ ಅನುಚ್ಛೇದದ ಮೇರೆಗೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ ಸ್ಥಳೀಯ ಸಂಸ್ಥೆಗಳ ಮೇಲಿನ 5ನೆ ವರದಿ ಮತ್ತು ಕರ್ನಾಟಕದಲ್ಲಿನ ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿಧಾಮಗಳ ಆಡಳಿತ ನಿರ್ವಹಣೆ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯ 6ನೆ ವರದಿಯನ್ನು ಮಂಡಿಸಲಾಗಿದೆ ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ತಿಳಿಸಿದರು. ಆನಂತರ, ರಾಷ್ಟ್ರಗೀತೆಯೊಂದಿಗೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.







