ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳದೆ ನಿರ್ಲಕ್ಷ್ಯವಹಿಸಿದ ಶುಶ್ರೂಷಕಿಯರು: ಆರೋಪ
ಮೂಡುಬಿದಿರೆ, ಜೂ. 21: ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಹೋಗಿದ್ದ ಬಾಲಕಿಯೋರ್ವಳನ್ನು ಹೊರಗೆ ನಿಲ್ಲಿಸಿ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾದ ಘಟನೆ ಮೂಡುಬಿದಿರೆ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಶುಶ್ರೂಷಕಿಯರಿಬ್ಬರ ವರ್ತನೆಯ ವಿರುದ್ಧ ಗ್ರಾ.ಪಂ. ಸದಸ್ಯರೋರ್ವರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಶಿರ್ತಾಡಿ ಗ್ರಾ.ಪಂ. ಸದಸ್ಯ ಯಶೋಧರ ಪೂಜಾರಿ ಪಚ್ಚಾಡಿ ತನ್ನ ಪುತ್ರಿ ಸುನೀತಾ (13)ಳನ್ನು ಕಳೆದ ಸೋಮವಾರ ಸಂಜೆ ಮೊದಲು ಶಿರ್ತಾಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ವೈದ್ಯರಿಲ್ಲದ ಕಾರಣ ಖಾಸಗಿ ವೈದ್ಯರಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ಶಿರ್ತಾಡಿಯ ಸರಕಾರಿ ವೈದ್ಯರ ಸಲಹೆ ಪಡೆದು ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು.
'ನಾನು ಡಾಕ್ಟ್ರಿಗೆ ಕಾಲ್ ಮಾಡಿ ಹೇಳುತ್ತೇನೆ, ಸರಕಾರಿ ಆಸ್ಪತ್ರೆಗೆ ಕರೆದೊಯ್ಯಿರಿ' ಎನ್ನುವ ಶಿರ್ತಾಡಿ ಸರಕಾರಿ ವೈದ್ಯರ ಸಲಹೆ ಮೇರೆಗೆ ಉಸಿರಾಟದ ಸಮಸ್ಯೆಯಲ್ಲಿದ್ದ ಪುತ್ರಿಯನ್ನು ಯಶೋಧರ ಪೂಜಾರಿಯವರು ಮೂಡುಬಿದಿರೆ ಆಸ್ಪತ್ರೆಗೆ ಕರೆದೊಯ್ದಿದ್ದರು.
ಮೂಡುಬಿದಿರೆ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಇಬ್ಬರು ಶುಶ್ರೂಷಕಿಯರು ಮಾತ್ರ ಇದ್ದು, 'ನಮಗೆ ಯಾವ ಡಾಕ್ಟ್ರೂ ಹೇಳಿಲ್ಲ. ಇಲ್ಲಿ ಡಾಕ್ಟ್ರು ಇಲ್ಲ. ಶಿರ್ತಾಡಿ ಡಾಕ್ಟ್ರು ಎಂತ ಹೇಳುವುದು? ನೀವು ಹೊರಗೆ ನಿಲ್ಲಿ' ಎಂದು ಯಾವುದೇ ಚಿಕಿತ್ಸೆ ನೀಡದೆ ನಿರ್ಲಕ್ಷಿಸಿದ್ದಾರೆನ್ನಲಾಗಿದೆ.
ಇದರಿಂದ ನೊಂದ ಯಶೋಧರ್ ಅವರು, ಚಿಕಿತ್ಸೆಯಾದರೂ ಮಾಡಿ ಎಂದು ಹೇಳಿದರೂ ಅದಕ್ಕೆ ಕ್ಯಾರೇ ಮಾಡದ ದಾದಿಯರು ಚಿಕಿತ್ಸೆ ನೀಡದೆ ನಿರ್ಲಕ್ಷಿಸಿದ್ದಾರೆನ್ನಲಾಗಿದೆ. ಬಡವರಿಗಾಗಿ ಇರುವ ಸರಕಾರಿ ಆಸ್ಪತ್ರೆಯಲ್ಲೇ ಬಡವರಿಗೇ ಈ ರೀತಿಯ ಅನ್ಯಾಯ ಆದರೆ ಹೇಗೆ? ಎಂದು ಯಶೋಧರ್ ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.







