ಮಹಾರಾಷ್ಟ್ರದಲ್ಲಿ ರೈತರು-ಪೊಲೀಸರ ನಡುವೆ ಸಂಘರ್ಷ

ಮುಂಬೈ, ಜೂ.22: ರಕ್ಷಣಾ ಸಚಿವಾಲಯಕ್ಕೆ ಸೇರಿರುವ ಜಮೀನನ್ನು ತಮಗೇ ನೀಡಬೇಕೆಂದು ರೈತರು ನಡೆಸುತ್ತಿದ್ದ ಆಂದೋಲನ ಗುರುವಾರ ಹಿಂಸಾರೂಪ ಪಡೆದಿದ್ದು, ಮಹಾರಾಷ್ಟ್ರದ ಥಾಣೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಪ್ರದೇಶದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬ್ರಿಟಿಷ್ ಕಾಲದ ಏರ್‌ಪೋರ್ಟ್ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲು ನೌಕಾದಳ ನಿರ್ಧರಿಸಿತ್ತು. ನೌಕಾಪಡೆಯ ಈ ನಿರ್ಧಾರವನ್ನು ವಿರೋಧಿಸಿ ರೈತರು ಭಾರೀ ಪ್ರತಿಭಟನೆ ಆರಂಭಿಸಿದ್ದಾರೆ.
ನೌಕಾದಳಕ್ಕೆ ಸೇರಿರುವ 12.600 ಎಕ್ರೆ ಪ್ರದೇಶವನ್ನು ಸ್ಥಳೀಯರು ಕಳೆದ ಕೆಲವು ವರ್ಷಗಳ ಹಿಂದೆ ಅತಿಕ್ರಮಣ ಮಾಡಿಕೊಂಡಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಭೂಮಿಯನ್ನು ತಮಗೇ ವಾಪಾಸು ನೀಡುವಂತೆ ರೈತರು ರಕ್ಷಣಾ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸಚಿವಾಲಯ ರೈತರ ಮನವಿಯನ್ನು ತಿರಸ್ಕರಿಸಿತ್ತು. ಆ ನಂತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.
ಗುರುವಾರ 17 ಹಳ್ಳಿಗಳ ರೈತರು 10 ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದ್ದು, ಥಾಣೆ-ಬದ್ಲಾಪುರ ಹೈವೇಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಸಂಚಾರ ಅಸ್ತವ್ಯಸ್ತಗೊಳಿಸಿದ್ದಾರೆ. ಪೊಲೀಸರು ರೈತರನ್ನು ಚದುರಿಸಲು ಮುಂದಾದ ಸಂದರ್ಭದಲ್ಲಿ ಘರ್ಷಣೆ ಉಂಟಾಗಿದೆ.







