ರೈಲ್ವೆ ಪ್ಲಾಟ್ ಫಾರಂನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಥಾಣೆ, ಜೂ.22: ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ರೈಲ್ವೆ ಪ್ಲಾಟ್ ಫಾರಂನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಥಾಣೆಯಲ್ಲಿ ನಡೆದಿದೆ.
ತುಂಬು ಗರ್ಭಿಣಿಯಾಗಿದ್ದ 24 ವರ್ಷದ ಮೀನಾಕ್ಷಿ ಹಾಗೂ ಆಕೆಯ ಪತಿ ಸಂದೇಶ್ ಆಸ್ಪತ್ರೆಗೆ ತೆರಳಲು ಥಾಣೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ರೈಲು ಹತ್ತುವ ಮುನ್ನವೇ ಮೀನಾಕ್ಷಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಇದರಿಂದ ಕಂಗಾಲಾದ ಸಂದೇಶ್ ಸಹಾಯ ಯಾಚಿಸಿದ್ದಾರೆ. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ರೈಲ್ವೆ ಭದ್ರತಾ ಪಡೆಯ ಅಧಿಕಾರಿ ಶೋಭಾ ಹಾಗೂ ಇತರ ಮಹಿಳೆಯರು ಅಗತ್ಯ ನೆರವು ನೀಡಿದ್ದಾರೆ, ಕೊನೆಗೂ ಮೀನಾಕ್ಷಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ತಾಯಿ ಹಾಗೂ ಮಗುವನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದ್ದು, ಇಬ್ಬರೂ ಸುರಕ್ಷಿತವಾಗಿದ್ದಾರೆ.
Next Story





