ತನ್ನ ಚಿತೆಗೆ ತಾನೇ ಬೆಂಕಿ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ!

ನಾಸಿಕ್, ಜೂ.22: ನಾಸಿಕ್ ಜಿಲ್ಲೆಯ ವಿವಿಧೆಡೆ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಒಂದೇ ದಿನ ನಾಲ್ವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಆರು ತಿಂಗಳಲ್ಲಿ ಮೃತಪಟ್ಟ ರೈತರ ಸಂಖ್ಯೆ 53ಕ್ಕೇರಿದೆ.
ಮಾಲೇಗಾಂವ್‌ನ ಖಾಕುರ್ಡಿ ಹಳ್ಳಿಯ ರೈತ ಸಪ್ಡೂ ಪವಾರ್(77) ತನ್ನ ಚಿತೆಗೆ ತಾನೇ ಬೆಂಕಿ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬ ಸದಸ್ಯರು ನಿದ್ದೆಗೆ ಜಾರಿದ್ದ ಸಮಯದಲ್ಲಿ ತನ್ನ ಚಿತೆಯನ್ನು ತಾನೇ ನಿರ್ಮಿಸಿಕೊಂಡಿದ್ದ ಪವಾರ್ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾನೆ.
ಪವಾರ್ ಕುಟುಂಬದವರು 2012ರ ನಂತರ 3.40 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಹಣಕಾಸು ಸಂಸ್ಥೆಗಳಲ್ಲೇ 2 ಲಕ್ಷ ರೂ. ಸಾಲವಿತ್ತು. ಮೃತ ರೈತ ಪವಾರ್‌ನ ಪತ್ನಿ ಸಹಕಾರಿ ಸಂಘದಿಂದ 80,000 ರೂ. ಸಾಲ ಪಡೆದಿದ್ದರು. ರೈತ ಪವಾರ್ ತನ್ನ ಜಮೀನನ್ನು ಮಾರಾಟ ಮಾಡಿದ್ದರೂ ಸಾಲ ತೀರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಚಿಂಚ್ವಾಡ ತಾಲೂಕಿನ 32ರ ಪ್ರಾಯದ ರೈತ ಅಪ್ಪಾಸಾಹೇಬ ಜಾಧವ್ ವಿದ್ಯುತ್ ವಯರ್‌ನ್ನು ಸ್ಪರ್ಶಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲೈಟ್ ಕಂಬವನ್ನೇರಿದ್ದ ಜಾಧವ್ ಹೈ-ವೋಲ್ಟೇಜ್ ವಯರ್‌ನ್ನು ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಜಾಧವ್ ಸಹಕಾರಿ ಸಂಘದಿಂದ ಪಡೆದಿದ್ದ 25,000 ರೂ. ಸಾಲ ಮರುಪಾವತಿಸಲು ವಿಫಲವಾಗಿದ್ದನೆಂದು ಮೂಲಗಳು ತಿಳಿಸಿವೆ.
ಚಾಂದ್ವಾಡ್ ತಾಲೂಕಿನ 65ರ ಪ್ರಾಯದ ರೈತ ಕಾರ್ಚು ಪಂಜ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ರೈತ 3 ಲಕ್ಷ ರೂ. ಸಾಲ ಮರಳಿಸಲು ವಿಫಲವಾಗಿದ್ದ ಎನ್ನಲಾಗಿದೆ.







