ಆರೆಸ್ಸೆಸ್ ಕಾರ್ಯಕರ್ತನ ಕೊಲೆ ಪ್ರಕರಣ: ಸಿಪಿಎಂ ಶಾಖಾ ಕಾರ್ಯದರ್ಶಿ ಬಂಧನ

ಪಯ್ಯನ್ನೂರ್, ಜೂ. 22: ಆರೆಸ್ಸೆಸ್ ಮಂಡಲ ಕಾರ್ಯವಾಹಕ್ ರಾಮಂತಳಿ ಕಕ್ಕಾಂಬಾರದ ಚುರಕ್ಕಾಟ್ ಬಿಜು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ಸಿಪಿಎಂ ಕುನ್ನರು ಕಾರಂದೋಡ್ ಶಾಖಾ ಕಾರ್ಯದರ್ಶಿ , ಕುನ್ನರು ಸಹಕಾರಿ ಬ್ಯಾಂಕ್ ನೌಕರ ಕಾಂದಾಟ್ಟೆ ಪಿ.ವಿ. ಪ್ರಜೀಶ್ ಯಾನೆ ಕುಟ್ಟ(28)ನನ್ನು ಪಯ್ಯನ್ನೂರ್ ಸಿಐ ಎಂ.ಪಿ. ಆಝಾದ್‌ರ ನೇತೃತ್ವದಲ್ಲಿ ಪೊಲೀಸರು ಬಂಧಿಸಿದರು.
ಕೊಲೆಗೆ ಸಂಚು ಹೆಣೆದ ಆರೋಪದಲ್ಲಿ ಪಿ.ವಿ. ಪ್ರಜೀಶ್‌ನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಯ್ಯನ್ನೂರ್ ಒಂದನೆ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಹಾಜರುಪಡಿಸಲಾಗಿದ್ದು, ಕೋರ್ಟು ಪ್ರಜೀಶ್‌ಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಹಿಂದೆ ಬಿಜು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿಯನ್ನು ಬಂಧಿಸಲಾಗಿತ್ತು. ಇವರಲ್ಲಿ ಐದು ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಿಜುಕೊಲೆ ಪ್ರಕರಣದಲ್ಲಿ ಒಟ್ಟು ಹನ್ನೆರಡು ಆರೋಪಿಗಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಮೇ.12ಕ್ಕೆ ಪಾಲಕ್ಕೋಡ್ ಸೇತುವೆ ಬಳಿ ಗೆಳೆಯ ರಾಜೇಶ್‌ನೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಇನ್ನೋವಾ ಕಾರಿನಲ್ಲಿ ಬಂದ ತಂಡ ಬಿಜುವನ್ನು ಕಡಿದು ಕೊಲೆಗೈದಿತ್ತು.





