ಝೀ ನ್ಯೂಸ್ ಪ್ರಕಾರ ಕಾಶ್ಮೀರ "ಭಾರತ ಆಕ್ರಮಿತ ಪ್ರದೇಶ"ವಂತೆ !

ಹೊಸದಿಲ್ಲಿ, ಜೂ.22: ಕೆಲ ದಿನಗಳ ಹಿಂದೆಯಷ್ಟೇ "ಶಾಕಿಂಗ್ ! ಕಾಶ್ಮೀರ್ ಲೇಬಲ್ಡ್ ಆ್ಯಸ್ ಇಂಡಿಯನ್ ಆಕ್ಯುಪೈಡ್ ಇನ್ ಯುಪಿ ಕಾಂಗ್ರೆಸ್ ಬುಕ್‍ಲೆಟ್" (ಶಾಕಿಂಗ್! ಕಾಂಗ್ರೆಸ್ ಬುಕ್ ಲೆಟ್ ನಲ್ಲಿ ಕಾಶ್ಮೀರವನ್ನು ಭಾರತ ಆಕ್ರಮಿತ ಪ್ರದೇಶ ಎಂದು ಬರೆಯಲಾಗಿದೆ) ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿ ಪ್ರಕಟಿಸಿದ್ದ ಝೀ ನ್ಯೂಸ್ ಈಗ ಇಂತದ್ದೇ ಪ್ರಮಾದವೊಂದರಲ್ಲಿ ತಾನೇ ಸಿಲುಕಿದೆ.
ಈ ಬಗ್ಗೆ ಆಲ್ಟ್ ನ್ಯೂಸ್ (Altnews.in) ವರದಿ ಮಾಡಿದೆ. "ಐಸಿಸಿ ಚಾಂಪಿಯನ್ಸ್ ಫೈನಲ್ ಪಂದ್ಯದಲ್ಲಿ ಭಾರತದ ಸೋಲನ್ನು ಕಾಶ್ಮೀರಿ ಯುವಕರು ಆಚರಿಸುವುದನ್ನು ನೋಡಿ'' ಎಂಬ ಶೀರ್ಷಿಕೆಯಡಿಯಲ್ಲಿ ಝೀ ನ್ಯೂಸ್ ಪ್ರಕಟಿಸಿದ ಲೇಖನವೊಂದರಲ್ಲಿ "ಭಾರತ ಆಕ್ರಮಿತ ಕಾಶ್ಮೀರದಲ್ಲಿ ಜನರು ಪಾಕಿಸ್ತಾನದ ವಿಜಯವನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದರು" ಎಂದು ಬರೆಯಲಾಗಿತ್ತು.

ತನ್ನ ಪ್ರಮಾದವನ್ನು ಅರಿತ ಝೀ ನ್ಯೂಸ್ ಈ ಲೇಖನವನ್ನು ತನ್ನ ವೆಬ್ ಸೈಟ್ ನಿಂದ ತೆಗೆದು ಹಾಕಿದೆ. ಆದರೆ ಅಷ್ಟರೊಳಗಾಗಿ ಅದು ಸಾಕಷ್ಟು ಟ್ವಿಟ್ಟರಿಗರ ಗಮನ ಸೆಳೆದಿದ್ದು ಝೀ ನ್ಯೂಸ್ ಅನ್ನು ಹಲವರು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ. ತನ್ನ ತೀವ್ರ ರಾಷ್ಟ್ರೀಯವಾದಕ್ಕೆ ಹೆಸರಾಗಿರುವ ಝೀ ನ್ಯೂಸ್ ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿಯ ಭಾರತ-ಪಾಕ್ ಪಂದ್ಯವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಈ ಬಗ್ಗೆ #ಸಬ್ಸೆಬಡಾದ್ರೋಹ್ ಎಂಬ ಹ್ಯಾಶ್ ಟ್ಯಾಗ್ ಕೂಡ ಹರಡಿತ್ತು.
ಕೆಲ ವಾರಗಳ ಹಿಂದೆ ಉತ್ತರ ಪ್ರದೇಶ ಕಾಂಗ್ರೆಸ್ ಪುಸ್ತಿಕೆಯಲ್ಲಿ ಕಾಶ್ಮೀರವನ್ನು ಭಾರತ ಆಕ್ರಮಿತ ಪ್ರದೇಶವೆಂದು ಬಣ್ಣಿಸಿರುವ ಬಗ್ಗೆ ವರದಿ ಮಾಡಿದ್ದ ಝೀ ನ್ಯೂಸ್ ಇದು ಉದ್ದೇಶಪೂರ್ವಕವಾಗಿ ಮಾಡಲಾಗಿತ್ತೇ ಇಲ್ಲವೇ ಪ್ರಮಾದವೇ ಎಂದು ತಿಳಿಯದು ಎಂದು ಬರೆದಿತ್ತು.
#SabseBadaDroh on @ZeeNews is exposing fake nationalists today both in media and politics.
— Sudhir Chaudhary (@sudhirchaudhary) 4 June 2017







